ಜಾಗತಿಕ ಚಲನಚಿತ್ರ -
ಚಲನಚಿತ್ರದ ಹುಟ್ಟು (ಜನನ) : 1895 ರ ಡಿಸೆಂಬರ್ 25 ರಂದು, ಆಗಸ್ಟ ಲೂಮಿಯರ್ ಮತ್ತು ಲೂಯಿ ಲೂಮಿಯರ್ ಸಹೋದರರು, ಫ್ರಾಂಸ್ ದೇಶದ ರಾಜಧಾನಿ ಪ್ಯಾರಿಸಿನಲ್ಲಿನ ಹೋಟೆಲ್ ಗ್ರಾಂಡ್ ಕೆಫೆ ಎಂಬ ಒಂದು ಹೋಟೆಲಿನಲ್ಲಿ ಚಲಿಸುವ ಬಿಂಬಗಳನ್ನು ತೋರಿಸುತ್ತೇವೆ ಎಂದು ಪ್ರಚಾರ ಮಾಡಿ, ಪ್ರವೇಶ ಧನವನ್ನು ಪಡೆದು ಹಲವು ಪ್ರೇಕ್ಷಕರನ್ನು ಸೇರಿಸಿ ಒಂದು ಪ್ರದರ್ಶನವನ್ನು ಏರ್ಪಡಿಸಿದರು. ಕೇವಲ ಕೆಲವೇ ಮಂದಿ ಪ್ರೇಕ್ಷಕರಿದ್ದgsÀೂ ಅವರಲ್ಲಿ ಕುತೂಹಲ ಮತ್ತು ಆಸಕ್ತಿ ಎದ್ದು ಕಾಣಿಸುತ್ತಿತ್ತು. ದೀಪಗಳನ್ನು ಆರಿಸಿ ಕೊಠಡಿಯನ್ನು ಕತ್ತಲೆ ಮಾಡಿ, ಒಂದು ಮೂಲೆಯಲ್ಲಿದ್ದ ಪ್ರೊಜೆಕ್ಟರನ್ನು ಚಾಲನೆ ಮಾಡಲಾಯಿತು. ಪರದೆಯಮೇಲೆ ಬಿಂಬಗಳು ಚಲಿಸಲು ಪ್ರಾರಂಭಿಸಿದವು. 

ಒಂದು ರೈಲು ನಿಲ್ದಾಣಕ್ಕೆ ಬಂದು ಸೇರುವ ದೃಶ್ಯ ಪರದೆಯಮೇಲೆ ಕಂಡಿತು. ನೆರೆದಿದ್ದ ಸಭಿಕರೆಲ್ಲಾ ಕಕ್ಕಾಬಿಕ್ಕಿಯಾಗಿ ಸ್ತಂಭೀಭೂತರಾದರು. ಅವರಿಗೆ ಗಾಬರಿ. ರೈಲು ತಮ್ಮ ಮೇಲೆಯೇ ಬಂದಂತಾಗಿ ಹೆದರಿ ಚೀರಿದರು. ಹಿಂದೆಂದೂ ಅಂತಹ ಚಲಿಸುವ ಚಿತ್ರಗಳನ್ನು ಕಂಡರಿಯದ ಮುಗ್ಧ ಸಭಿಕರು ರೋಮಾಂಚನಗೊಂಡರು. ಚೇತರಿಸಿಕೊಳ್ಳುವುದರಲ್ಲಿ ಮತ್ತೊಂದು ಚಿತ್ರ, ಈ ಬಾರಿ ಒಬ್ಬ ತೋಟದ ಮಾಲಿ ತನ್ನ ರಬ್ಬರಿನ ಕೊಳವೆಯಿಂದ ಗಿಡಗಳಿಗೆ ನೀರೆರೆಯುವ ದೃಶ್ಯ, ಕಾರ್ಖಾನೆಯಿಂದ ಕೆಲಸ ಮುಗಿಸಿಕೊಂಡು ಕಾರ್ಮಿಕರು ಒಟ್ಟಿಗೆ ಹೊರಬರುವ ದೃಶ್ಯ, ನಂತರ ಒಂದು ಗೋಡೆಯನ್ನು ಕೆಡವಿಸುವ ದೃಶ್ಯ ಹೀಗೆ ಒಟ್ಟು ಹತ್ತು ಚುಟುಕು ದೃಶ್ಯಗಳ ಚಿತ್ರಗಳನ್ನು ತಾವೇ ತಯಾರಿಸಿದ ಯಂತ್ರದಿಂದ 20 ನಿಮಿಷಗಳ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದರು. 

ಈ ಚಲಿಸುವ ಚಿತ್ರಗಳನ್ನು, ಲೂಮಿಯರ್ ಸಹೋದರರು, ತಾವೇ ತಯಾರಿಸಿದ ಕೊಂಡೊಯ್ಯ ಬಹುದಾದಂತಹ ಪ್ರೊಜೆಕ್ಟರನ್ನೊಳಗೊಂಡ ಕ್ಯಾಮೆರಾದಲ್ಲಿ ತಯಾರಿಸಿದ್ದರು. ಈ ಯಂತ್ರಕ್ಕೆ ಸಿನಿಮಟೋಗ್ರಫಿ ಎಂದು ನಾಮಾಂಕಿತ ಮಾಡಿ ತಮ್ಮಹೆಸರಿನಲ್ಲಿ ದಾಖಲು ಮಾಡಿಸಿ ಅದರ ಹಕ್ಕುದಾರರಾದರು. ಚಲನಚಿತ್ರಕ್ಕೆ ಸಿನೆಮಾ ಎಂಬ ಹೆಸರು ಬರಲು ಇದೇ ಮೂಲ ಕಾರಣ.

ಮೊದಲನೆಯ ದಿನದ ಪ್ರದರ್ಶನಕ್ಕೆ 50ಕ್ಕೂ ಕಮ್ಮಿ ಜನ ಹಾಜರಿದ್ದರು. ಅಂದಿನ ಪ್ರದರ್ಶನವನ್ನು ವೀಕ್ಷಿಸಿ ದಿಗ್ಭ್ರಮೆಗೊಂಡ ಜನರ ವರದಿಯನ್ನು ಕೇಳಿದ ಮೇಲೆ ಜನರು ಮಾರನೆಯ ದಿನದಿಂದ ಗುಂಪು ಗುಂಪಾಗಿ ಬಂದು ದೊಡ್ಡಬಾಲದಂತೆ ಬೆಳೆದು ನಿಂತ ಸಾಲಿನಲ್ಲಿ ಕಾದು ನಿಂತು ಟಿಕೀಟು ಪಡೆದು ಪ್ರವೇಶ ಪಡೆಯಲು ಪ್ರಾರಂಭವಾಯಿತು. ಜನರ ಪ್ರತಿಕ್ರಿಯೆ ಹೇಳಲಸದಳವಾಗಿತ್ತು. ಅವರ ಕಣ್ಣನ್ನು ಅವರೇ ನಂಬದಂತಹ ಪರಿಸ್ಥಿತಿಯಲ್ಲಿದ್ದರು. 

ಚಲನಚಿತ್ರದ ಇತಿಹಾಸಕಾರರು ಈ ದಿನವನ್ನು ಅಂದರೆ 1895 ರ ಡಿಸೆಂಬರಿನ 28ನ್ನು ಚಲನಚಿತ್ರದ ಹುಟ್ಟು ಹಬ್ಬದ ದಿನವೆಂದು ಅಧಿಕೃತವಾಗಿ ಪರಿಗಣಿಸಿದ್ದಾರೆ. ಲೂಮಿಯರ್ ಸಹೋದರರನ್ನು ಚಲನಚಿತ್ರದ ಹುಟ್ಟಿಗೆ ಕಾರಣರಾದ ಮೂಲಪುರುಷರೆಂದು ಚರಿತ್ರಕಾರರು ಕರೆದಿದ್ದಾರೆ.

ಅಸಂಖ್ಯಾತ ಸಂಶೋಧಕರು ಚಲನಚಿತ್ರದ ಜನನ ಮತ್ತು ಬೆಳವಣಿಗೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. 19ನೇ ಶತಮಾನದ ಆದಿಯಲ್ಲಿ ಭೌತಶಾಸ್ತ್ರದ ವಿಜ್ಞಾನಿಗಳು ಛಾಯಾಚಿತ್ರದ ಬಗ್ಗೆ ಸಂಶೋಧನೆಗಳನ್ನು ಮಾಡಿ ಮಾನವನ ಕಣ್ಣು ಯಾವುದಾದರೂ ಒಂದು ವಸ್ತುವನ್ನು ನೋಡಿದ ಮೇಲೆ, ಅದರ ಬಿಂಬ ಕಣ್ಣಿನಲ್ಲಿ ಅರೆಕ್ಷಣವಾದರೂ ಉಳಿಯುತ್ತದೆಂದು ಕಂಡುಹಿಡಿದರು. ಇದೊಂದು ಮಹತ್ತರ ಸಾಧನೆ. ಈ ತತ್ವವನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಒಂದು ಚಲಿಸುವ ವಸ್ತುವನ್ನು ಬಿಡಿ ಬಿಡಿಯಾಗಿ ಸ್ಥಿರಚಿತ್ರಗಳಲ್ಲಿ ಹಿಡಿದು ಅವುಗಳನ್ನು ಒಟ್ಟಿಗೆ ವೇಗವಾಗಿ ಹಾಯಿಸಿದಾಗ ಆ ವಸ್ತು ನಮ್ಮ ಕಣ್ಣಿಗೆ ನಿಜವಾಗಿ ಚಲಿಸಿದಂತೆ ಭಾಸವಾಗುತ್ತದೆ. 1894ರ ವೇಳೆಗಾಗಲೇ ಎಡಿಸನ್ನನು ತನ್ನದೇ ಆದ ಕೈನೆಟೊಸ್ಕೋಪ್ ಎಂಬ ಒಂದು ಯಂತ್ರವನ್ನು ಮಾಡಿ ಚಿತ್ರ್ರಗಳನ್ನು ಮಾಡುವ ಹವಣಿಕೆಯಲ್ಲಿದ್ದ. ಆದರೆ ಲೂಮಿಯರ್ ಸಹೋದರರು ತಮ್ಮ ಯಂತ್ರವನ್ನು ಅಚ್ಚುಕಟ್ಟಾಗಿಸಿ ಎಲ್ಲರಿಗಿಂತ ಮುಂಚೆ ಪ್ರವೇಶಧನ ವಸೂಲು ಮಾಡಿ ಪ್ರದರ್ಶನ ಮಾಡಿದ ಹೆಗ್ಗಳಿಕೆಗೆ ಅರ್ಹರಾದರು. 50 ಅಡಿ ಉದ್ದದ, ಒಂದು ನಿಮಿಷದಷ್ಟು ಸಮಯದಲ್ಲಿ ಓಡುವ 100 ಚುಟಕಗಳನ್ನು ತಯಾರಿಸಿ ದಿನ ನಿತ್ಯ ಪ್ರದರ್ಶನ ಮಾಡಿ ಹಣ ಗಳಿಸಲು ಪ್ರಾರಂಭಿಸಿದರು. ಇಸ್ಪೀಟು ಆಡುತ್ತಿರುವುದು, ಬೆಳಗಿನ ಉಪಾಹಾರ ಸೇವಿಸುತ್ತಿರುವುದು, ಒಂದು ಮಗು ಒಂದು ಗಾಜಿನ ಪಾತ್ರೆಯಲ್ಲಿ ಚಲಿಸುವ ಮೀನುಗಳನ್ನು ನೋಡುತ್ತಿರುವುದು, ಹೀಗೆ ಅನೇಕ ಚಿತ್ರಗಳನ್ನು ತಯಾರಿಸಿದರು. ಇದೇ ಸಮಯದಲ್ಲಿ ಅಮೆರಿಕಾದಲ್ಲಿ ಕೂಡ ಖ್ಯಾತ ವಿಜ್ಞಾನಿ ಎಡಿಸನ್, ಇಂತಹ ಅನೇಕ ಸಾಕ್ಷ್ಯಚಿತ್ರಗಳ ಚುಟಕಗಳನ್ನು ಮಾಡಿ ಸಜೀವ ವಾದ್ಯಗೋಷ್ಠಿಯೊಂದಿಗೆ ಪ್ರದರ್ಶನ ಮಾಡುತ್ತಿದ್ದರು. ಲೂಮಿಯರ್ ಸಹೋದರರಿಗೆ ಈ ಒಂದು ಸದವಕಾಶವನ್ನು ಉಪಯೋಗಿಸಿಕೊಂಡು ಸಾಕಷ್ಟು ಹಣ ಮಾಡಬೇಕೆಂಬ ಆಸೆಯಿಂದ ಈ ಚುಟುಕು ಚಿತ್ರಗಳನ್ನು 15 ಹೊರದೇಶಗಳಿಗೆ ಒಯ್ದು ಪ್ರದರ್ಶನಗಳನ್ನು ಮಾಡಿ, ಹಣಮಾಡುವಲ್ಲಿ ಯಶಸ್ವಿಯೂ ಆದರು.

ಲೂಮಿಯರ್ ಅವರ ಸಹಾಯಕ ಮಾರಿಯು ಸೆಸ್ಟಿಯರ್ ಆಸ್ಟ್ರೇಲಿಯಕ್ಕೆ ಹೋಗುವ ಮಾರ್ಗದಲ್ಲಿ ಬೊಂಬಾಯಿಯಲ್ಲಿ ತಂಗಿ 1896, ಜುಲೈ, 7 ರಂದು, ವಾಟ್ಸನ್ ಹೋಟಲ್‍ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ 50 ಅಡಿ ಉದ್ದದ ಆರು ಚಿತ್ರಗಳನ್ನು ಪ್ರದರ್ಶಿಸಿದರು. ಈ ಪ್ರದರ್ಶನಕ್ಕೆ ಹಾಜರಾದವರು ತಲಾ ಒಂದು ರೂಪಾಯಿಯಂತೆ ಪ್ರವೇಶ ಧನವನ್ನು ಕೊಟ್ಟು ವೀಕ್ಷಿಸಿದರು. ಇದರಿಂದಾಗಿ ಫ್ರಾನ್ಸಿನಲ್ಲಿ ಜನಿಸಿದ ಚಲನಚಿತ್ರ ಕೇವಲ ಆರು ತಿಂಗಳ ನಂತರ ಭಾರತದಲ್ಲಿಯೂ ತನ್ನ ಹಾಜರಿಯನ್ನು ಹಾಕಿತು. ಈ ಪ್ರದರ್ಶನದ ಬಗ್ಗೆ ಬೊಂಬಾಯಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಇದನ್ನು `ಈ ಶತಮಾನದ ಒಂದು ಅದ್ಭುತವೆಂದು ಅಭಿನಂದನೆಯ ಮಳೆಗರಿಯಿತು.

ಈ ಪ್ರದರ್ಶನಗಳಲ್ಲಿ ಭಾಗವಹಿಸಿ ಸ್ಫೂರ್ತಿಗೊಂಡ ಹರಿಶ್ಚಂದ್ರ ಸಖಾರಾಮ್ ಭಟ್ಟಾಡೇಕರ್ ಎಂಬ ಸ್ಥಿರ ಚಿತ್ರಗಳ ಛಾಯಾಗ್ರಾಹಕ ಪರದೇಶದಿಂದ ಆಮದು ಮಾಡಿಕೊಂಡ ಒಂದು ಕ್ಯಾಮೆರ ಮತ್ತು ಪ್ರೊಜೆಕ್ಟರ್ ಉಪಯೋಗಿಸಿಕೊಂಡು ಒಂದು ಕುಸ್ತಿ ಪಂದ್ಯದ ಸಾಕ್ಷ್ಯಚಿತ್ರವನ್ನು ತಯಾರುಮಾಡಿ ಸಾರ್ವಜನಿಕರಿಗೆ 1901ರಲ್ಲಿ ಪ್ರದರ್ಶನ ಮಾಡುವ ಮೂಲಕ ಭಾರತದಲ್ಲಿ ಚಲನ ಚಿತ್ರವನ್ನು ಮೊದಲಬಾರಿಗೆ ತಯಾರು ಮಾಡಿದ ಸಾಹಸಿಗರಲ್ಲಿ ಒಬ್ಬರಾದರು. ಇದೇ ಸಮಯದಲ್ಲಿ ಭಾರತದಲ್ಲಿ ಮತ್ತಿತರ ಭಾಗಗಳಲ್ಲಿ ಕೂಡ ಚಲನಚಿತ್ರಗಳ ತಯಾರಿಕೆ ಪ್ರಾರಂಭವಾಯಿತು. 

1895ರಲ್ಲಿ ಜನಿಸಿದ ನಂತರ, ನಾಲ್ಕೈದು ವರ್ಷಗಳವರೆಗೆ ಅದೊಂದು ಕೇವಲ ವೈಜ್ಞಾನಿಕ ಅಭ್ಯುದಯವಾಗಿಯೇ ಉಳಿಯಿತು. 1900ರ ಹೊತ್ತಿಗೆ ಜಾರ್ಜ್ ಮಿಲಿಯು ಎಂಬ ಫ್ರಾನ್ಸಿನ ಒಬ್ಬ ಯಕ್ಷಿಣಿಗಾರ ಚಲನಚಿತ್ರದಿಂದ ಪ್ರಭಾವಿತಗೊಂಡು ತನ್ನ ವೃತ್ತಿಗೆ ಇದರಿಂದ ಹೆಚ್ಚು ಉಪಯೋಗವಾಗಹುದೆಂಬ ನಂಬಿಕೆಯಿಂದ ಸ್ಫೂರ್ತಿಗೊಂಡು ಚಲನಚಿತ್ರದ ನಿರ್ಮಾಣದಲ್ಲಿ ತೊಡಗಬೇಕೆಂದು ನಿಶ್ಚಯಿಸಿದರು. ತನ್ನ ಆಸೆಯನ್ನು ಸಾಕಾರಗೊಳಿಸಲು ಲೂಮಿಯರ್ ಸಹೋದರರ ಬಳಿಯಲ್ಲಿ ತನ್ನಾಸೆಯನ್ನು ತೋಡಿಕೊಂಡು ಅವರಲ್ಲಿದ್ದ ಕ್ಯಾಮೆರಾವನ್ನು ಕೊಳ್ಳಲು ಬೇಡಿಕೊಂಡರು. ಆದರೆ ಲೂಮಿಯರ್ ಸಹೋದರರು ತಮ್ಮ ಯಂತ್ರವನ್ನು ಇವರಿಗೆ ಮಾರಲು ಒಪ್ಪಲಿಲ್ಲ. ಆದರೆ ಮಿಲಿಯು ಧೃತಿಗೆಡಲಿಲ್ಲ. ತಮ್ಮದೇ ಆದ ಕ್ಯಾಮೆರಾವನ್ನು ತಯಾರು ಮಾಡಿದರು. ತನ್ನದೇ ಆದ ಸ್ಟುಡಿಯೋವನ್ನು ನಿರ್ಮಿಸಿ ನೂರಾರು ಚಿತ್ರಗಳನ್ನು ಮಾಡಿದರು. ವೃತ್ತಿಯಲ್ಲಿ ಯಕ್ಷಿಣಿಗಾರನಾದ್ದರಿಂದ ತಮ್ಮ ಎಲ್ಲ ಚಿತ್ರಗಳಲ್ಲಿ ಮಾಯಾಜಾಲ, ಯಕ್ಷಿಣಿ, ಇವುಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಮನೋರಂಜನಾ ಚಿತ್ರಗಳನ್ನು ಮಾಡಿ ಜನರನ್ನು ರಂಜಿಸಿದರು. ಇವರು ಮಾಡಿದ ಚಿತ್ರಗಳು ಬ್ರಿಟನ್, ಅಮೆರಿಕ ಮುಂತಾದ ಹೊರದೇಶಗಳಲ್ಲಿ ಕೂಡ ಜನಪ್ರಿಯವಾದುವು. 

1902ರಲ್ಲಿ, ಮಿಲಿಯು, ಎ ಟ್ರಿಪ್ ಟು ಮೂನ್ ಎಂಬ 14 ನಿಮಿಷದ ಕಥಾ ಚಿತ್ರವನ್ನು ಮಾಡಿ ವಿಶ್ವದಲ್ಲಿ ಮೊದಲಬಾರಿಗೆ ಚಿತ್ರದ ಮೂಲಕ ಒಂದು ಕಾದಂಬರಿ ಆಧಾರಿತ ಕಥೆಯನ್ನು ಚಲನಚಿತ್ರದ ಮೂಲಕ ಜನರಿಗೆ ನಿರೂಪಿಸಿದ ಮಹಾವ್ಯಕ್ತಿಯೆಂದು ಹೆಸರು ಮಾಡಿದರು. ಈ ಚಿತ್ರದಲ್ಲಿ ಮಿಲಿಯು ತನ್ನ ಮಾಂತ್ರಿಕ ವಿದ್ಯೆಯ ಪರಿಣತೆಯನ್ನು ಉಪಯೋಗಿಸಿಕೊಂಡು, ಅನೇಕ ಚಮತ್ಕಾರಗಳನ್ನು, ಯಕ್ಷಿಣಿಗಳನ್ನು, ಕಾಲ್ಪನಿಕ ಪವಾಡಗಳನ್ನು ಅಳವಡಿಸಿಕೊಂಡು ಈ ಚಿತ್ರವನ್ನು ನಿರ್ಮಿಸಿದರು. ಚಿತ್ರಜಗತ್ತಿನ ಬೆಳವಣಿಗೆಯಲ್ಲಿ ಇದೊಂಡು ಅದ್ಭುತ ಸಾಧನೆ. ಮಿಲಯುನ ಈ ಚಿತ್ರ ಅತ್ಯಂತ ಜನಪ್ರಿಯತೆಗಳಿಸಿ ಅಪಾರ ಯಶಸ್ಸುಗಳಿಸಿತು. ಚಲನಚಿತ್ರಗಳ ಮೂಲಕ ಚಮತ್ಕಾರಗಳನ್ನು ಕ್ಯಾಮೆರಾದ ಮೂಲಕ ಮಾಡಬಹುದು ಮತ್ತು ಕಥೆಗಳನ್ನೂ ಹೇಳಬಹುದು ಎಂಬ ಅಂಶವನ್ನು ಜನರಿಗೆ ಅರಿವು ಮಾಡಿಕೊಟ್ಟ ಈ ಚಿತ್ರ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲುಗಲ್ಲಾಯಿತು. 

1903ರ ವರ್ಷದ ಒಂದು ದಿನ, ಅಮೆರಿಕದ ಎಡ್ವಿನ್ ಪೋರ್ಟರ್ ಎಂಬ ವ್ಯಕ್ತಿ, ಮತ್ತೊಂದು ಹೆಜ್ಜೆ ಮುಂದುವರೆದು, ಕ್ಯಾಮೆರಾವನ್ನು ಎಲ್ಲ ಕಡೆಗಳಿಗೂ ಒಯ್ದು, ಭಯಾನಕ ದೃಶ್ಯಗಳನ್ನೊಳಗೊಂಡು ಹೋರಾಟ ನಡೆಸುವ ದೃಶ್ಯಗಳನ್ನುಳ್ಳ ಕಥಾವಸ್ತುವನ್ನು ಚಲನ ಚಿತ್ರಗಳಮೂಲಕ ನಿರೂಪಣೆ ಮಾಡಬಹುದು ಎಂಬ ವಿಷಯವನ್ನು ತಮ್ಮ ಚಿತ್ರ ದಿ ಗ್ರೇಟ್ ಟ್ರೈನ್ ರಾಬರಿ ಚಿತ್ರವನ್ನು ಮಾಡಿ ಚಿತ್ರಪ್ರಪಂಚಕ್ಕೆ ತೋರಿಸಿಕೊಟ್ಟರು. ಶಸ್ತ್ರಾಸ್ತ್ರ ಗುಂಪೊಂದು ರೈಲೊಂದನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೆದರಿಸಿ ದರೋಡೆ ಮಾಡಿ, ಓಡುತ್ತಿರುವಾಗ ಸಶಸ್ತ್ರ ಪಡೆಗಳು ಅವರನ್ನು ಹಿಂಬಾಲಿಸಿ ಅವರನ್ನು ದಮನ ಮಾಡಿದ ವಸ್ತುವೇ ಇದರ ಕಥೆ. 
ಮೊದಲ ಬಾರಿಗೆ ಕ್ಯಾಮೆರಾವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ದು ಚಿತ್ರಿಸುವ ಪರಿಪಾಠವನ್ನು ಈ ಚಿತ್ರ ಸೃಷ್ಟಿಸಿತು. ಇದಕ್ಕೆ ಮುಂಚೆ ಕ್ಯಾಮೆರಾ ಕೇವಲ ಒಂದು ಕಡೆಯಲ್ಲಿ ಮಾತ್ರ ಉಳಿಯುತ್ತಿತ್ತು. ಈ ಚಿತ್ರದಲ್ಲಿ ಎಲ್ಲೆಡೆ ಅಂದರೆ, ರೈಲಿನ ಮೇಲೆ ಕೂಡ ಸವಾರಿ ಮಾಡಿ ವಿಜೃಂಭಿಸಿತು. ಪೂರ್ಣ ಚಿತ್ರವನ್ನು ಹೊರಾಂಗಣದ ದೃಶ್ಯಗಳನ್ನೂ ಸೇರಿಸಿ 20 ಷಾಟ್‍ಗಳಲ್ಲಿ ತೆಗೆದು ನಂತರ ಎಲ್ಲವನ್ನೂ ಜೋಡಿಸಲಾಯಿತಂತೆ. ಈ ಚಿತ್ರದ ಮೂಲಕ ಸಂಕಲನದ ಕುಶಲತೆಯನ್ನೂ ಚಲನಚಿತ್ರಕ್ಕೆ ಮೊದಲ ಬಾರಿಗೆ ಸೇರಿಸಿಕೊಳ್ಳಲಾಯಿತು. ಈ ಕಿರು ಚಿತ್ರ ಅಂದಿನವರೆಗಿನ ಎಲ್ಲ ದಾಖಲೆಗಳನ್ನೂ ಮುರಿದು ಅಪಾರ ಹಣಗಳಿಸಿದ ಚಿತ್ರವಾಯಿತು.

ಚುಟಕಗಳಿಂದ ರೀಲಿಗೆ :
ಚಲನಚಿತ್ರವು ಯೂರೋಪಿನಲ್ಲಿ ಹುಟ್ಟಿದಾಗ್ಯೂ ಅದರ ಬೆಳವಣಿಗೆ ಅಮೆರಿಕಾದಲ್ಲಿ ಹೆಚ್ಚು ರಭಸದಿಂದ ಆಯಿತು. ಅಮೆರಿಕದಲ್ಲಿನ ಉತ್ತಮ ಆರ್ಥಿಕ ಪರಿಸ್ಥಿತಿ ಹಾಗೂ ಜನರಿಂದ ಅದಕ್ಕೆ ಸಿಕ್ಕಿದ ಪ್ರೋತ್ಸಾಹ, ಇವುಗಳೇ ಈ ಬೆಳವಣಿಗೆಗೆ ಕಾರಣ. 1900ರ ಪ್ರಾರಂಭದ ದಿನಗಳಲ್ಲಿ ಚಲನಚಿತ್ರವು ಕೇವಲ ಕೆಳ ದರ್ಜೆಯ ಮನರಂಜನೆಯಾಗಿತ್ತು. ಕಾರ್ಖಾನೆಗಳಲ್ಲಿ ಕೆಲಸಮಾಡುವ ಕಾರ್ಮಿಕರು ಸಂಜೆಯ ವೇಳೆಯಲ್ಲಿ ಚಿಕ್ಕ ಪುಟ್ಟ ಸಭಾಂಗಣಗಳಲ್ಲಿ ನಡೆಯತ್ತಿದ್ದ ಈ ಚಿತ್ರ ಪ್ರದರ್ಶನಗಳಿಗೆ ಒಂದು ನಿಕಲ್ ಪ್ರವೇಶಧನ ಕೊಟ್ಟು ನೋಡುತ್ತಿದ್ದರು. ಅಂದಿನ ದಿನಗಳಲ್ಲಿ ಇವುಗಳನ್ನು ನಿಕಲೋಡಿಯನ್ಸ್ ಎಂದು ಕರೆಯುತ್ತಿದ್ದರು. 

ಜಾರ್ಜ ಮಿಲಿಯು ಮತ್ತು ಎಡ್ವಿನ್ ಪೋರ್ಟರ್ ಇವರುಗಳು ಮಾಡಿದ ಚಿತ್ರಗಳಿಂದ ಸ್ಫೂರ್ತಿಗೊಂಡು ಅನೇಕರು ಕಿರು ಚುಟಕ ಚಿತ್ರಗಳಿಂದ, ಉದ್ದನೆಯ ಚಿತ್ರಗಳನ್ನು ಮಾಡಲು ಸಾಹಸ ಮಾಡಿದರು. ಈ ಒಂದು ನಿಟ್ಟಿನಲ್ಲಿ ಅಡಾಲ್ಪ್ ಜುಕರ್ ಎಂಬುವವರು, ಫ್ರಾನ್ಸಿನಲ್ಲಿ ಕ್ವೀನ್ ಎಲಿಜಬೆತ್ ಎಂಬ ನಾಲ್ಕು ರೀಲಿನ ಚಿತ್ರವನ್ನು 1912ರಲ್ಲಿ ಮಾಡಿದರು. ಇಟಲಿಯಲ್ಲಿ 1913ರಲ್ಲಿ ಎನ್ರಿಕೊ ಗುಜೋನಿ ಎರಡು ಗಂಟೆಗಳಷ್ಟು ಪ್ರದರ್ಶನಾವಧಿಯ ಅದ್ದೂರಿ ಚಿತ್ರವನ್ನು ತಯಾರು ಮಾಡಿ ಹೊಸ ದಾಖಲೆಯನ್ನೇ ಸ್ಥಾಪಿಸಿದರು. ಇದೊಂದು ಅತ್ಯಂತ ಯಶಸ್ವಿ ಚಿತ್ರವೂ ಆಯಿತು. 

ಕಥಾಚಿತ್ರಗಳ ಯಶಸ್ಸಿನಿಂದ ಸ್ಫೂರ್ತಿಗೊಂಡ ಅಮೆರಿಕದ ಡೇವಿಡ್ ವಾರ್ಕ್ ಗ್ರಿಫಿತ್(1875-1948) 1915ರಲ್ಲಿ ದಿ ಬರ್ತ್ ಆಫ್ ಎ ನೇಷನ್ ಎಂಬ ಅದ್ಭುತ ಚಿತ್ರವನ್ನು ತಯಾರಿಸಿದರು. ಈ ಚಿತ್ರ ಅಮೆರಿಕದ ಇತಿಹಾಸವನ್ನು ಕಥಾವಸ್ತುವಾಗಿ ಇಟ್ಟುಕೊಂಡು, ಭಾರಿ ಭಾರಿ ಜನಸಮೂಹದಿಂದ ಕೂಡಿದ ಕಾಳಗಗಳ ದೃಶ್ಯ, ಹೊರಾಂಗಣದ ಪ್ರಕೃತಿ ದೃಶ್ಯ, ಮತ್ತು ನೂರಾರು ಜನರನ್ನು ಒಟ್ಟಿಗೆ ಸೇರಿಸಿ ಅವರ ನಟನೆಗಳನ್ನು ಸೆರೆ ಹಿಡಿದ ದೃಶ್ಯ, ಹೀಗೆ ಅನೇಕ ಹೊಸ ತಿರುವುಗಳನ್ನು ಕೊಟ್ಟು ಚಲನಚಿತ್ರಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟ ಹೆಗ್ಗಳಿಕೆ ಗ್ರಿಫಿತ್ತರಿಗೆ ಸೇರಬೇಕು. ಹಿಂದೆಂದೂ ಕಂಡರಿಯದಂತಹ ಅದ್ದೂರಿ ಚಿತ್ರ ಇದಾಯಿತು. ತನ್ನ ಬಳಿಯಿದ್ದ ಮತ್ತು ಅನೇಕರಿಂದ ಪಡೆದ ಹಣವೆಲ್ಲವನ್ನೂ ಸೇರಿಸಿ, ಸುಮಾರು ಒಂದು ಲಕ್ಷ ಡಾಲರ್‍ಗಳಷ್ಟು, ಅಂದರೆ ಅಂದಿನ ಕಾಲಕ್ಕೆ ಅದು ಬಹು ದೊಡ್ಡ ಮೊತ್ತ, ಹಣವನ್ನು ಸುರಿದು ಈ ಚಿತ್ರವನ್ನು ತಯಾರಿಸಿ ಬಿಡುಗಡೆ ಮಾಡಿದರು. ಇಷ್ಟೆಲ್ಲಾ ಆದ ನಂತರ ಈ ಚಿತ್ರದ ಕಥಾವಸ್ತು, ಅಮೆರಿಕದ ಕಪ್ಪು ಬುಡಕಟ್ಟಿನ ಜನರನ್ನು ಕೀಳುಮಟ್ಟದಲ್ಲಿ ತೋರಿಸಿದ್ದಾರೆಂಬ ವಿವಾದಕ್ಕೆ ಗುರಿಯಾಗಿ ಅಮೆರಿಕಾದ ಅನೇಕ ಭಾಗಗಳಲ್ಲಿ ಚಿತ್ರವನ್ನು ನಿಷೇಧ ಪಡಿಸಲಾಯಿತು. ಆದಾಗ್ಯೂ ಈ ಚಿತ್ರ ಅತ್ಯಂತ ಯಶಸ್ವಿ ಚಿತ್ರವಾಗಿ, ಪ್ರದರ್ಶನಗೊಂಡ ಎಲ್ಲ ಕಡೆ ಭಾರಿ ಯಶಸ್ಸು ಸಾಧಿಸಿ ಹತ್ತು ಮಿಲಿಯನ್ ಡಾಲರ್‍ನಷ್ಟು ಹಣ ಸಂಪಾದನೆ ಮಾಡಿ ಭರ್ಜರಿ ದಾಖಲೆ ಮಾಡಿತು. ಈ ಯಶಸ್ಸಿನಿಂದ ಉತ್ಸಾಹಗೊಂಡ ಗ್ರಿಫಿತ್ತರು 1916ರಲ್ಲಿ ಸುಮಾರು ನಾಲ್ಕು ಲಕ್ಷ ಡಾಲರ್ ಗಳಷ್ಟು ಹಣವನ್ನು ಬಳಸಿ ಇಂಟಾಲರೆನ್ಸ್ ಎಂಬ ಭವ್ಯ ಚಿತ್ರವನ್ನು ಮಾಡಿದರು. ಚಲನಚಿತ್ರ ಇತಿಹಾಸಕಾರರು ಚಲನಚಿತ್ರ ಬೆಳವಣಿಗೆಯಲ್ಲಿ ಇದೊಂದು ಮೈಲುಗಲ್ಲು ಎಂದು ಕರೆಯುತ್ತಾರೆ. ಈ ಚಿತ್ರವು ಅವರ ಮೊದಲ ಚಿತ್ರಕ್ಕಿಂತ ಹೆಚ್ಚು ಅದ್ಭುತವಾದದ್ದು ಎಂದು ಪರಿಗಣಿಸಲಾಗಿದೆ. ಆದರೆ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅಸಹನೀಯ ಸೋಲನ್ನನುಭವಿಸಬೇಕಾಯಿತು. 

ಅಮೆರಿಕದಲ್ಲಿ ಗ್ರಿಫಿತ್ತರು ಅಸಾಧಾರಣ, ಪ್ರತಿಭಾನ್ವಿತ ಚಿತ್ರ ತಯಾರಕನೆಂಬ ಹೆಸರು ಮಾಡಿದರೆ, ಅತ್ತ ಸೋವಿಯತ್ ರಷ್ಯ ನಾನೇನು ಕಮ್ಮಿ ಎಂದು ಅಲ್ಲಿಯೂ ಒಬ್ಬ ಅದ್ಭುತ ಚಿತ್ರತಯಾರಕನನ್ನು ಸೃಷ್ಟಿಸಿತು. 1925ರಲ್ಲಿ ಸೆರ್ಜಿ ಮಿಖಿಲೋವಿಚ್ ಐಸೆನ್‍ಸ್ಟೈನ್, ಬ್ಯಾಟಲ್ ಷಿಪ್ ಪೊಟೆಂಕಿನ್ ಎಂಬ ಒಂದು ಆಸಾಧಾರಣ ಚಿತ್ರವನ್ನು ನಿರ್ಮಿಸಿ ಚಲನಚಿತ್ರಕ್ಕೆ ಒಂದು ಹೊಸ ತಾಂತ್ರಿಕತೆಯನ್ನು ಸೇರಿಸಿದರು. ಅದೇನೆಂದರೆ ಒಂದೇ ದೃಶ್ಯದ ಹಲವಾರು ಷಾಟ್‍ಗಳನ್ನು ಸೆರೆಹಿಡಿದು ಅವುಗಳನ್ನು ವಿವಿಧರೀತಿಯಲ್ಲಿ ಜೋಡಿಸಿದಾಗ ಅದರಿಂದ ಉಂಟಾಗುವ ಪರಿಣಾಮ ಬಹು ಆದ್ಭುತ ಎಂಬುದನ್ನು ಕಂಡುಹಿಡಿದ. ಈ ಒಂದು ತಾಂತ್ರಿಕತೆಯನ್ನು ಮಾಂಟೇಜ್ ಎಂದು ಕರೆಯಲ್ಪಟ್ಟು, ಚಲನಚಿತ್ರದ ಬೆಳವಣಿಗೆಗೆ ಇದೊಂದು ಅಪಾರ ಕೊಡುಗೆಯಾಗಿ ಪರಿಣಮಿಸಿತು.

ಬ್ಯಾಟಲ್‍ಷಿಪ್ ಪೊಟೆಂಕಿನ್ ಚಿತ್ರದ ಕಥಾವಸ್ತು ಕ್ರಾಂತಿಕಾರಕ ಎಂಬ ಕಾರಣಕ್ಕಾಗಿ ಬಿಟ್ರನ್ನಿನಲ್ಲಿ ಸಾರ್ವಜನಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಲಿಲ್ಲ. ಪುದೊವ್ಕಿನ್, ಡೊವ್ಜೆಂಕೊ ನಿರ್ದೇಶಿಸಿದ ರಷ್ಯದ ಚಿತ್ರಗಳು ಮತ್ತು ಫ್ರಾನ್ಸ್ ಮತ್ತು ಜರ್ಮನಿಯ ಕೆಲವು ಕಲಾತ್ಮಕ ಚಿತ್ರಗಳೂ ಇದೇ ರೀತಿಯ ಸಮಸ್ಯೆ ಎದುರಿಸಬೇಕಾಯಿತು. ಈ ಚಿತ್ರಗಳನ್ನು ಜನರು ನೋಡಲು ಬರುವುದಿಲ್ಲವೆಂಬ ಕಾರಣಕ್ಕಾಗಿ ಚಿತ್ರ ವಿತರಕರು ಪ್ರದರ್ಶನಕ್ಕೆ ಕೊಳ್ಳುತ್ತಿರಲಿಲ್ಲ. ಹೀಗಾಗಿ, ಈ ಚಿತ್ರಗಳನ್ನು ನೋಡಲೇಬೇಕೆಂಬ ಹಂಬಲವುಳ್ಳ ಅನೇಕರು ಫಿಲಂ ಸೊಸೈಟಿಗಳನ್ನು ಮಾಡಿಕೊಂಡು ಖಾಸಗಿ ಪ್ರದರ್ಶನಗಳನ್ನು ಮಾಡಿ ನೋಡಲಾರಂಭಿಸಿದರು. ಫಿಲಂಸೊಸೈಟಿಗಳ ಹುಟ್ಟುವಿಕೆಗೆ ಇದು ಪ್ರಬಲ ಕಾರಣವಾಯಿತು. ಈ ಒಂದು ಚಟುವಟಿಕೆ ಇಂದಿಗೂ ಪ್ರಸ್ತುತದಲ್ಲಿದೆ.

ಡಿ. ಡಬ್ಲ್ಯು. ಗ್ರಿಫಿತ್ ಮತ್ತು ಐಸೆನ್‍ಸ್ಟೈನ್ ಇವರುಗಳ ಅಪಾರ ಕೊಡುಗೆಯಿಂದಾಗಿ ಸಿನಿಮಾಕ್ಕೆ ಹೊಸ ಆಯಾಮ ದೊರೆಯಿತು. ಇದರಿಂದಾಗಿ ದೃಶ್ಯ ಮಾಧ್ಯಮದ ಪ್ರಭಾವ ದಿನೇ ದಿನೇ ವೃದ್ಧಿಯಗುತ್ತಾ ಬೆಳೆಯಿತು. ಏನನ್ನು ಬೇಕಾದರೂ ಚಲನಚಿತ್ರದ ಮೂಲಕ ತೋರಿಸಬಹುದು ಎಂಬ ಒಂದು ಮನವರಿಕೆಯಿಂದ ಜನಪ್ರಿಯತೆ ಅಪರಿಮಿತವಾಗಿ ಏರಿತು. ಮಿಕ್ಕೆಲ್ಲ ಕಲಾಮಾಧ್ಯಮಗಳನ್ನು ಹಿಂದೆ ಸರಿಸಿ ಸಿನಿಮಾ ಮುಂದೆ ಹೆಜ್ಜೆ ಹಾಕಲು ಪ್ರಾರಂಭಿಸಿತು. ತಾನು ಜನಿಸಿದ ನಂತರದ ಕೇವಲ ಎರಡು ದಶಕಗ¼ಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿದ್ದು ಒಂದು ಪವಾಡವೇ ಎನ್ನಬಹುದು. 

1920ರ ವೇಳೆಗೆ ಸಿನಿಮಾದ ಜನಪ್ರಿಯತೆ ಎಷ್ಟಕ್ಕೆ ಏರಿತೆಂದರೆ, ಅಮೆರಿಕಾದಲ್ಲಿ, ಕಾರ್ಖಾನೆಗಳಲ್ಲಿ ಯಂತ್ರಗಳ ಮೂಲಕ ಸರಕುಗಳನ್ನು ತಯಾರುಮಾಡುವ ಮಾದರಿಯಲ್ಲಿ ಚಿತ್ರಗಳನ್ನು ಉತ್ಪಾದನೆ ಮಾಡಲು ಸಲಕರಣೆಗಳನ್ನು ಸ್ಟುಡಿಯೋಗಳಲ್ಲಿ ಅಳವಡಿಸಿ ನಿರಂತರವಾಗಿ, ಅಂದರೆ ಹಗಲಿರುಳು, ಚಲನಚಿತ್ರಗಳ ಉತ್ಪಾದನೆ ಪ್ರಾರಂಭವಾಯಿತು. ಚಿತ್ರನಿರ್ಮಾಣದ ಚಟುವಟಿಕೆಗಳು ನ್ಯೂಯಾರ್ಕ್‍ನಿಂದ ಪಶ್ಚಿಮದ ಕಡಲು ತೀರದಲ್ಲಿ ಅದಕ್ಕಾಗಿ ನಿರ್ಮಿತವಾದ ಹಾಲಿವುಡ್ ಸ್ಟುಡಿಯೋಗೆ ಸ್ಥಳಾಂತರ ಹೊಂದಿತು. ಅದ್ಭುತವಾದ ಸ್ಟುಡಿಯೋಗಳು ಅಸ್ತಿತ್ವಕ್ಕೆ ಬಂದವು, ಇಂದು ಪ್ರಪಂಚದ ಎಲ್ಲೆಡೆ ಜನಪ್ರಿಯತೆ ಗಳಿಸಿರುವ ಚಿತ್ರನಿರ್ಮಾಣ ಕಂಪೆನಿಗಳು ಯೂನಿವರ್ಸಲ್ ಪಿಕ್ಚರ್ಸ್ (1912), ಯುನೈಟೆಡ್ ಆರ್ಟಿಸ್ಟ್ (1919), ವಾರ್ನರ್ ಬ್ರದರ್ಸ್ (1923), ಮೆಟ್ರೊ ಗೋಲ್ಡ್ವಿನ್ ಮೇಯರ್ (ಎಂ.ಜಿ.ಎಂ) 1924ರಲ್ಲಿ ಪ್ಯಾರಾಮೌಂಟ್, 1927ರಲ್ಲಿ ಟ್ವೆಂಟಿಯತ್ ಚೆಂಚುರಿ ಫಾಕ್ಸ್, 1933ರಲ್ಲಿ ಮತ್ತು ಇನ್ನೂ ಅನೇಕ ಕಂಪೆನಿಗಳು ಈ ಒಂದು ಸ್ವರ್ಣಯುಗದಲ್ಲಿ ಅಸ್ತಿತ್ವಕ್ಕೆ ಬಂದು ಇಂದಿಗೂ ರಾರಾಜಿಸುತ್ತಿವೆ. ಹಾಲಿವುಡ್‍ನ ಸ್ಟುಡಿಯೊಗಳಲ್ಲಿ ಚಿತ್ರಗಳನ್ನು ತಯಾರಿಸಲು ಕಾರ್ಖಾನೆಗಳಲ್ಲಿರುವಂತೆ ಕ್ಯಾಮೆರಾ, ಕಥಾ ಸಂಭಾಷಣೆ, ಸಂಗೀತ, ಕಲೆ, ಸಂಕಲನ, ಹಣಕಾಸು ಇತ್ಯಾದಿಯಾಗಿ ಎಲ್ಲಕ್ಕೂ ಪ್ರತ್ಯೇಕವಾದ ವಿಭಾಗಗಳು ಹುಟ್ಟಿಕೊಂಡವು. ಚಲನಚಿತ್ರಗಳನ್ನು ಸರಕು, ಸಾಮಗ್ರಿಗಳಂತೆ ಭಾರಿ ಸಂಖ್ಯೆಯಲ್ಲಿ ಉತ್ಪಾದನೆ ಮಾಡಿ, ವಿಶ್ವದ ನಾನಾ ರಾಷ್ಟ್ರಗಳಲ್ಲಿ ಅನೇಕ ಚಿತ್ರಮಂದಿರಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡು ತಮ್ಮ ಚಿತ್ರಗಳಿಗೆ ಪ್ರದರ್ಶನಾವಕಾಶ ಕಲ್ಪಿಸಿಕೊಂಡರು. ಚಲನಚಿತ್ರ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇಂದಿಗೂ ಅಮೆರಿಕ ಚಿತ್ರಗಳ ಪ್ರಾಬಲ್ಯ ಬೆಳೆಯುತ್ತಲೇ ಇದೆ. 

1920ರ ದಶಕದ ಕೊನೆಯವರೆಗೆ ಪ್ರಪಂಚದ ಅನೇಕ ದೇಶಗಳಲ್ಲಿ ಸಹಸ್ರಗಳ ಸಂಖ್ಯೆಯಲ್ಲಿ ಸಂಭಾಷಣೆಗಳಿಲ್ಲದ ಮೂಕಚಿತ್ರಗಳು ತಯಾರಾದವು. ಈ ಒಂದು ಕಾಲದಲ್ಲಿ ಅನೇಕ ಉತ್ತಮ ಹಾಸ್ಯ ಪ್ರಧಾನವಾದ ಚಿತ್ರಗಳು ಹೊರಬಂದವು. ಚಾರ್ಲ್ ಚಾಪ್ಲಿನ್, ಬಸ್ಟರ್ ಕೀಟನ್, ಹೆರಾಲ್ಡ್ ಲಾಯಿಡ್ ಮತ್ತು ಇನ್ನೂ ಅನೇಕ ಮಂದಿ ಹಾಸ್ಯ ಚಕ್ರವರ್ತಿಗಳು ಕಲಾತ್ಮಕವಾದ ಹಾಸ್ಯಚಿತ್ರಗಳನ್ನು ಮಾಡಿದರು. ಇದರಿಂದಾಗಿ ಚಲನಚಿತ್ರ ಇತಿಹಾಸಕಾರರು, ಮೂಕಚಿತ್ರಗಳ ಯುಗವನ್ನು ಹಾಸ್ಯಚಿತ್ರಗಳ ಯುಗ ಎಂದೂ ಕರೆದಿದ್ದಾರೆ. ಈ ಒಂದು ದಶಕದಲ್ಲಿ ಹಾಸ್ಯಚಿತ್ರಗಳೇ ಅಲ್ಲದೆ ಅಮೆರಿಕ ಮತ್ತು ಇನ್ನಿತರ ದೇಶಗಳಿಂದ ಉತ್ತಮ ಕಥಾಚಿತ್ರಗಳನ್ನು ಹೆಸರಾಂತ ನಿರ್ದೇಶಕರುಗಳು ಮಾಡಿದರು. ಹೀಗೆ ತಯಾರಾದ ಸಹಸ್ರಾರು ಚಿತ್ರಗಳ ಪೈಕಿ ಕೆಲವು ಪ್ರಮುಖ ಚಿತ್ರಗಳ ಹೆಸರುಗಳನ್ನು ಕೆಳಗೆ ಪಟ್ಟಿಮಾಡಿದೆ.

ಖ್ಯಾತ ಮೂಕ ಚಿತ್ರಗಳು : 

ಅಮೆರಿಕ : ಡಿ.ಡಬ್ಲು. ಗ್ರಿಫಿತ್ ರವರ ದಿ ಬರ್ತ್ ಆಫ್ ಎ ನೇಷನ್ (1915) ಮತ್ತು ಇಂಟಾಲರೆನ್ಸ್ (1916),
ಚಾಪಲಿನ್ ಅವರ ದಿ ಕಿಡ್ (1921 ), ಎರಿಕ್ ವಾನ್ ಸ್ಟ್ರೊಹೀಮ್ ರವರ ಫೂಲಿಷ್ ವೈವ್ಸ್ (1922), ರಾಬರ್ಟ್ ಫ್ಲಹರ್ಟಿಯವರ ನಾನೂಕ್ ಓಫ್ ದಿ ನಾರ್ತ್ ( 1922), ಎರಿಕ್ ವಾನ್ ಸ್ಟ್ರೊಹಿಮ್ ರವರ ಗ್ರೀಡ್ (1924 ), ರಾವಲ್ ವಾಲ್ಷ್ ರವರ ದಿ ತೀಫ್ ಆಫ್ ಬಾಗದಾದ್ (1924),ಎಫ್. ಡಬ್ಲು.ಮರ್ನೊ ರವರ ದಿ ಲಾಸ್ಟ್ ಲಾಫ್, (1924), ಜಾನ್ ಫೋರ್ಡ್ ರವರ ದಿ ಐರನ್ ಹಾರ್ಸ್ (1924), ಚಾಪ್ಲಿನ್ ರವರ ದಿ ಗೋಲ್ಡ್ ರಷ್ (1925),ಬಸ್ಟರ್ ಕೀಟನ್ ರವರ ದಿ ಜನರಲ್ (1926), ಎಫ್.ಡಬ್ಲು.ಮಾರ್ನೊ ರವರ ಸನ್ ರೈಸ್ (1927), ಚಾಪ್ಲಿನ್ ರವರ ದಿ ಸರ್ಕಸ್ (1928), ವಿಕ್ಟರ್ ಜೊಸ್ಟ್ರಾಮ್ ರವರ ದಿ ವಿನ್ಡ್ (1928), ಚಾಪ್ಲಿನ್‍ರವರ ದಿ ಸಿಟಿ ಲೈಟ್ಸ್ (1926), 

ಜರ್ಮನಿ : ರಾಬೆರ್ಟ್ ವೈನ್ ರವರ ದಿ ಕ್ಯಾಬಿನೆಟ್ ಆಫ್ ಡಾಕ್ಟರ್ ಕಾಲಿಗಾರಿ (1920), ಪಾಲ್ ವಾಗ್ನರ್ ರವರ ಗೋಲಮ್(1920), ಫ್ರಿಟ್ಜ್ ಲಾಂಗ್ ರವರ ಮೆಟ್ರೋ ಪೋಲಿಸ್ (1927),

ರಷ್ಯ : ಐಸೆನ್‍ಸ್ಟೈನ್ ರವರ ದಿ ಬ್ಯಾಟಲ್ ಷಿಪ್ ಪೊಟೆಂಕಿನ್ (1925), ಪುದೋವ್ಕಿನ್ ಅವರ ಮದರ್ (1926), ಐಸೆನ್‍ಸ್ಟೆನ್‍ರವರ ಅಕ್ಟೋಬರ್ (1928), ಅಲೆಕ್ಸಾಂಡರ್ ಡೊವ್ಜೆಂಕೊ ರವರ ಅರ್ತ್ (1930).
ಫ್ರಾನ್ಸ್ : ಲೂಯಿ ಬುನೆಲ್ ರವರ ಉನ್ ಚಿಯೆ ಅಂಡಲೊ (1928), ಕಾರ್ಲ್ ಡ್ರೈಯರ್ ರವರ ದಿ ಪ್ಯಾಷನ್ ಆಫ್ ಜೋನ್ ಆಫ್ ಆರ್ಕ್ (1928),

ಭಾರತ : ಫ್ರಾನ್ ಓಸ್ಟನ್ ಮತ್ತು ಹಿಮಾಂಷು ರಾಯ್ ರವರ : ಲೈಟ್ ಆಫ್ ಏಷಿಯ (1926), ಷಿರಾಜ್ (1928), ಮತ್ತು ತ್ರೋ ಆಫ್ ಡೈಸ್ (1930) 
ಮತ್ತು ಇನ್ನೂ ಆನೇಕ ಚಿತ್ರಗಳು.

1920 ರ ದಶಕದ ಕೊನೆಯವರೆಗೆ ಮೂಕಚಿತ್ರಗಳು ತಮ್ಮ ಸುವರ್ಣಯುಗದಲ್ಲಿ ಸಾಕಷ್ಟು ಮಿಂಚಿದವು. 1925-1926 ರ ಹೊತ್ತಿಗೆ, ಚಲನಚಿತ್ರಕ್ಕೆ ಧ್ವನಿಯನ್ನು ಸೇರಿಸುವ ಬಗ್ಗೆ ಸಂಶೋಧನೆಗಳು ಭರದಿಂದ ಸಾಗುತ್ತಿದ್ದವು. 1928ರಲ್ಲಿ ಸಿಂಗಿಂಗ್ ಫೂಲ್ ಎಂಬ ಚಿತ್ರ ಶಬ್ದಗಳನ್ನುಳ್ಳ ಹಾಗೂ ಸಂಭಾಷಣೆಗಳನ್ನುಳ್ಳ, ವಿಶ್ವದ ಮೊದಲ ಚಲನಚಿತ್ರವಾಯಿತು. ಮೂಕ ಚಿತ್ರಗಳ ಅಂತ್ಯಕ್ಕೆ ಇದು ನಾಂದಿಯಾಯಿತು. ಚಲನಚಿತ್ರಕ್ಕೆ ಧ್ವನಿ ಪದಾರ್ಪಣೆ ಮಾಡಿದ ನಂತರ, ಮೂಕಚಿತ್ರಗಳು ಪರದೆಯ ಹಿಂದೆ ಸರಿಯಬೇಕಾಯಿತು. ಆದರೆ ಮೂರು ದಶಕಗಳಲ್ಲಿ ಮೂಕ ಚಿತ್ರಗಳ ತಯಾರಕರು ನಮಗೆ ಕೊಟ್ಟಿರುವ ಬಳುವಳಿ ಅತ್ಯಂತ ರೋಮಾಂಚನಕಾರಿಯಾಗಿ ಚರಿತ್ರೆಯಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ.

ಚಲನಚಿತ್ರಕ್ಕೆ ಧ್ವನಿ ಬಂದ ಮೇಲೆ ಅದರ ಸ್ವರೂಪವೇ ಬದಲಿತು. ಆದರೆ ಬಂದ ಹೊಸದರಲ್ಲಿ, ಚಾರ್ಲಿ ಚಾಪ್ಲಿನ್, ಫ್ರಾನ್ಸಿನ ರೆನೆ ಕ್ಲೇರ್, ರಷ್ಯಾದ ಪುದೋವ್ಕಿನ್, ಮುಂತಾದ ಅನೇಕ ಮೂಕಚಿತ್ರ ನಿರ್ದೇಶಕರುಗಳು ಈ ಒಂದು ಹೊಸ ತಾಂತ್ರಿಕ ಸೌಲಭ್ಯದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದರು. ಧ್ವನಿ ಚಲನಚಿತ್ರವನ್ನು ಪ್ರಗತಿ ಪಥದಿಂದ ಹಿಂದಕ್ಕೆ ತಳ್ಳಬಹುದು ಎಂಬ ಶಂಕೆ ಅವರನ್ನು ಕಾಡುತ್ತಿತ್ತು. ಕಲಾತ್ಮಕವಾಗಿ ಕ್ಯಾಮೆರಾವನ್ನು ವಿವಿಧ ಸ್ಥಳಗಳಿಗೆ ಒಯ್ದು ಜನರನ್ನು ರಂಜಿಸುವ ಕಲೆಗೆ ಕೊಡಲಿ ಪೆಟ್ಟು ಬಿದ್ದು ಕ್ಯಾಮೆರ ತನ್ನ ಸ್ವಸ್ಥಳದಲ್ಲಿ ಕೂತು ತನ್ನ ಶಕ್ತಿಯನ್ನು ಕಳೆದು ಕೊಂಡು, ಸಿನಿಮಾ ಕೂಡ ನಾಟಕದಂತೆ ಆಗಿಬಿಡುತ್ತದೆ ಎಂಬುದು ಅವರ ವಾದವಾಗಿತ್ತು. ಮೂಕಚಿತ್ರಗಳಲ್ಲಿ ಅಪಾರ ಯಶಸ್ಸು ಗಳಿಸಿ, ಹೆಸರು ಮಾಡಿ ಜನಪ್ರಿಯರಾಗಿದ್ದ ಈ ವ್ಯಕ್ತಿಗಳಿಗೆ ಇಂತಹ ಒಂದು ಯೋಚನೆ ಬಂದದ್ದು ಸಹಜವೇ. ಧ್ವನಿಯ ಬಳಕೆ ಬಂದಮೇಲೆ, ನೈಜಸ್ಥಿತಿಯನ್ನು ನೋಡಿದ ಮೇಲೆ, ಅವರಿಗಿದ್ದ ಈ ಒಂದು ಸಂದೇಹ ಬಹು ಬೇಗ ಅವರಿಂದ ದೂರವಾಯಿತು. ರೆನೆ ಕ್ಲೇರ್ ರವರು 1931ರಲ್ಲಿ ತಾವು ನಿರ್ದೇಶಿಸಿದ ಲೆ ಮಿಲಿಯನ್ ಚಿತ್ರಕ್ಕೆ ಯಾವರೀತಿ ಧ್ವನಿಯನ್ನು ಅಳವಡಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಅವರಿಗೆ ಸ್ವಲ್ಪ ಜಿಜ್ಞಾಸೆಯೇ ಆಯಿತು. ಚಿತ್ರದಲ್ಲಿ ಎಲ್ಲ ಪಾತ್ರಗಳೂ ನಾಟಕದಲ್ಲಿದ್ದಂತೆ ಹಾಡುಗಳ ಮೂಲಕವೇ ಸಂಭಾಷಣೆ ಮಾಡುತ್ತಾರೆ. ಈ ಚಿತ್ರ ಒಂದು ಹಾಸ್ಯಪ್ರದ ಸುಂದರ ಮನೋರಂಜಕ ಚಿತ್ರವಾಗಿ ಪರಿಣಮಿಸಿತು. ಇಂದಿಗೂ ಈ ಚಿತ್ರವನ್ನು ಒಂದು ಮೈಲಿಗಲ್ಲು ಚಿತ್ರವೆಂಬುದು ಅನೇಕ ತಜ್ಞರ ಅಭಿಪ್ರಾಯ. ಚಾಪಲಿನ್ ಕೂಡ 1936ರಲ್ಲಿ ತಯಾರಿಸಿದ ಮಾಡರ್ನ ಟೈಮ್ಸ್ ಚಿತ್ರದಲ್ಲಿ ಕೇವಲ ವಾದ್ಯ ಸಂಗೀತವನ್ನು ಉಪಯೋಗಿಸಿಕೊಂಡರೇ ವಿನಹ ಸಂಭಾಷಣೆಗಳನ್ನು ಅಳವಡಿಸಿಕೊಳ್ಳಲಿಲ್ಲ. ಈ ಚಿತ್ರವನ್ನು ಇತಿಹಾಸಕಾರರು ಚಲನಚಿತ್ರ ಪ್ರಪಂಚದಲ್ಲಿ ಒಂದು ಶ್ರೇಷ್ಠ ಕಲಾತ್ಮಕ ಕೃತಿ ಎಂದು ಪರಿಗಣಿಸಿದ್ದಾರೆ. ಮೂಕ ಚಿತ್ರಗಳಲ್ಲಿ ಹೆಸರು ಮಾಡಿ, ತಮ್ಮನ್ನು ಅದಕ್ಕೆ ಒಗ್ಗಿಸಿಕೊಂಡ ಹಲವಾರು ನಿರ್ದೇಶಕರುಗಳಿಗೆ ಧ್ವನಿಯನ್ನು ಸೇರಿಸಿಕೊಂಡು ಚಿತ್ರಮಾಡುವುದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು. ಹಲವಾರು ಮೂಕ ಚಿತ್ರಗಳ ಪರಿಣಿತರು ಬಹು ಬೇಗ ಪರದೆಯಿಂದ ಹಿಂದೆ ಸರಿಯಬೇಕಾಯಿತು. ಆದರೆ ಕೆಲವರು ಬಹುಬೇಗ ಧ್ವನಿಯನ್ನು ಉಪಯೋಗಿಸಿ ಕೊಳ್ಳುವ ಜಾಣ್ಮೆಯನ್ನು ಆರಿತು ಉತ್ತಮ ಚಿತ್ರಗಳನ್ನು ಜನತೆಗೆ ಅರ್ಪಿಸಿದರು. ಮೆಟ್ರೋ ಪೋಲಿಸ್‍ನಂತಹ ಹೆಸರಾಂತ ಮೂಕ ಚಿತ್ರಗಳನ್ನು ಮಾಡಿ ಖ್ಯಾತಿಗಳಿಸಿದ್ದ, ಜರ್ಮನಿಯ ಫ್ರಿಟ್ಜ್ ಲ್ಯಾಂಗ್ ತಮ್ಮ ಎಂ (ಒ) ಎಂಬ ಧ್ವನಿ ಮತ್ತು ಸಂಭಾಷಣೆಗಳನ್ನುಳ್ಳ ಒಂದು ಅದ್ಭುತ ಚಿತ್ರವನ್ನು 1931ರಲ್ಲಿ ತಯಾರುಮಾಡಿ, ಚಿತ್ರ ನಿರ್ಮಾಣದಲ್ಲಿ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿದರು. ಧ್ವನಿ ಚಿತ್ರಗಳಿಗೆ ಬಂದ ಹೊಸತರಲ್ಲಿ, ಈ ಒಂದು ಹೊಸ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಮರ್ಮವನ್ನು ಚಿತ್ರ ಪ್ರಪಂಚಕ್ಕೆ ಲ್ಯಾಂಗ್ ತೋರಿಸಿಕೊಟ್ಟರು. ಮಕ್ಕಳುಗಳನ್ನು ಸರಣಿಕೊಲೆ ಮಾಡುತ್ತಿದ್ದ ಒಬ್ಬ ವಿಕೃತ ವ್ಯಕ್ತಿಯ ಬಗ್ಗೆ ಮಾಡಿದ ಈ ಚಿತ್ರ ಒಂದು ಹೊಸ ಜಾಡನ್ನೇ ತೋರಿಸಿಕೊಟ್ಟಿತು.

ಚಿತ್ರಕ್ಕೆ ಧ್ವನಿ ಸೇರಿದಮೇಲೆ, ಚಲನಚಿತ್ರದ ಪ್ರಭಾವ ಮತ್ತಷ್ಟು ಹೆಚ್ಚಿತು. ಜನಪ್ರಿಯತೆಯಲ್ಲಿ ಅದಕ್ಕೆ ಸಮಾನವಾಗಿ ಯಾವ ಕಲಾಮಾಧ್ಯಮವೂ ಸ್ಫರ್ಧಿಸಲಾಗದೇ ಹೋಗಿ ಕೇವಲ ತನ್ನ ನಾಲ್ಕುದಶಕದ ಅಸ್ತಿತ್ವದಲ್ಲಿ ತನ್ನ ಅಗ್ರಸ್ಥಾನವನ್ನು ಗಳಿಸಿಕೊಂಡಿತು. 1940ರ ದಶಕದಲ್ಲಿ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ, ಅದರಲ್ಲೂ ರಷ್ಯಾದಲ್ಲಿ ಆಡಳಿತ ನಡೆಸುತ್ತಿದ್ದ ರಾಜಕೀಯ ಪಕ್ಷಗಳು ಈ ಮಾಧ್ಯಮದ ಶಕ್ತಿಯನ್ನು ಅರಿತುಕೊಂಡು ಇದನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂಬ ಯೋಚನೆಯಲ್ಲಿ ಮಗ್ನರಾದರು. ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಚಿತ್ರಗಳನ್ನು ಕೇವಲ ಸ್ಟುಡಿಯೋಗಳಲ್ಲಿಯೇ ತಯಾರುಮಾಡುತ್ತಿದ್ದರು. ಅಮೆರಿಕ ಹಾಲಿವುಡ್‍ನಲ್ಲಿನ ತನ್ನ ಸ್ಟುಡಿಯೋಗಳನ್ನು ಅಧುನೀಕರಣ ಮಾಡಿ ಹೊಸ ಹೊಸ ಪ್ರತಿಭೆಗಳನ್ನು ಕೈ ತುಂಬ ಹಣ ಕೊಟ್ಟು ದೇಶ ವಿದೇಶಗಳಿಂದ ಕರೆಸಿಕೊಂಡು, ಮನರಂಜನೆಯಿಂದ ಜನರನ್ನು ಆಕರ್ಷಿಸಿ, ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳನ್ನು ತಮ್ಮ ಹತೋಟಿಗೆ ತಂದುಕೊಂಡು ಅಪಾರ ಹಣಗಳಿಸುವ ಉತ್ಪಾದನಾ ಉದ್ಯಮವನ್ನಾಗಿ ಮಾಡಿಕೊಂಡರು. ಇಂದಿಗೂ ಅಮೆರಿಕ ಈ ಸ್ವಾಮ್ಯವನ್ನು ರೂಢಿಸಿಕೊಂಡೇ ಬಂದಿದೆ. ಆದರೆ ಚಲನಚಿತ್ರಗಳ ಕಲಾತ್ಮಕ ಬೆಳವಣಿಗೆ ಯೂರೋಪಿನಲ್ಲಿ ಬೇರೂರಿತು. ಆರ್ಥಿಕವಾಗಿ ಅಮೆರಿಕದೊಂದಿಗೆ ಸ್ಫರ್ಧಿಸಲು ಸಾಧ್ಯವಿಲ್ಲವಾದರೂ, ಕಲಾತ್ಮಕವಾಗಿ, ಮಾನವೀಯತೆ ದೃಷ್ಟಿಯಿಂದ ಯೂರೋಪಿನ ಚಿತ್ರಗಳು ಹೆಚ್ಚು ಪ್ರಗತಿಯನ್ನು ಸಾಧಿಸಿವೆ. 

1930ರ ದಶಕದಲ್ಲಿ ಫಾನ್ಸ್‍ನಲ್ಲಿ ಜೀನ್ ರೆನ್ವಾರ್ ಎಂಬ ಪ್ರಬುದ್ಧ ಚಿತ್ರನಿರ್ದೇಶಕ ದಿ ಗ್ರಾಂಡ್ ಇಲ್ಯೂಷನ್ (1937), ಮತ್ತು ರೂಲ್ಸ್ ಆಫ್ ದಿ ಗೇಮ್ (1939), ಎಂಬ ಎರಡು ಶ್ರೇಷ್ಠ ಚಿತ್ರಗಳನ್ನು ಮಾಡಿದರು. ಈ ಚಿತ್ರಗಳು ಇಂದಿಗೂ ಚಲನಚಿತ್ರ ಇತಿಹಾಸದಲ್ಲಿ ಆತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡಿವೆ. ಯೂರೋಪಿನಲ್ಲಿ ಮೊದಲನೇ ಮಹಾಯುದ್ಧ(1914-18) ಮತ್ತು ಎರಡನೇ ಮಹಾಯುದ್ಧ (1939-1946)ಗಳು ನಡೆದು, ಅದರಿಂದ ಉಂಟಾದ ಲಕ್ಷಾಂತರ ಸಾವುಗಳು, ಭೀಕರ ಪರಿಸ್ಥಿತಿ ಜನರ ಮೇಲೆ ಅತಿಶಯವಾದ ಪರಿಣಾಮ ಬೀರಿತು. ಆನೇಕ ಬುದ್ಧಿಜೀವಿಗಳು, ಜ್ಞಾನಿಗಳು ಇದರಿಂದ ಬೇಸತ್ತು ಯುದ್ಧಗಳ ವಿರುದ್ದ ತಮ್ಮ ಆಭಿಪ್ರಾಯಗಳನ್ನು ಸಾಹಿತ್ಯದ ಮೂಲಕ, ಹಾಗೂ ಹಲವರು ಚಿತ್ರಗಳ ಮೂಲಕ ತೋಡಿಕೊಳ್ಳುತ್ತಿದ್ದರು. ದಿ ಗ್ರಾಂಡ್ ಇಲ್ಯೂಷನ್ ಚಿತ್ರದಲ್ಲಿ ರೆನ್ವಾರ್ ರವರು ಜನರ ಮನಮುಟ್ಟವಂತೆ ಯುದ್ಧದ ದುಷ್ಪರಿಣಾಮಗಳನ್ನು ಅರಿವುಮಾಡಿಕೊಟ್ಟಿದ್ದಾರೆ ಅವರ ಸಮಕಾಲೀನರಾದ ಸ್ಪೈನ್ ದೇಶದ ಲೂಯಿ ಬುನೆಲ್ (1900-1983) ರವರು, ಫ್ರಾನ್ಸ್ ದೇಶಕ್ಕೆ ಬಂದು ಮೂಕ ಚಿತ್ರಗಳ ಕಾಲದಿಂದಲೂ ಚಿತ್ರಗಳನ್ನು ಮಾಡಲು ಪ್ರಾರಂಭಿಸಿ, ಧ್ವನಿಚಿತ್ರಗಳು, ನಂತರದಲ್ಲಿ ಬಣ್ಣದ ಚಿತ್ರಗಳನ್ನೂ, ಮೆಕ್ಸಿಕೊಗೂ ತೆರಳಿ ಅಲ್ಲಿಯೂ ಚಿತ್ರಗಳನ್ನು ಮಾಡಿ ತಮ್ಮ 70ನೇ ವಯಸ್ಸಿನವರೆಗೂ ಚಟುವಟಿಕೆಯಿಂದ ದುಡಿದರು. ಇವರ ವೈಶಿಷ್ಟ್ಯವೆಂದರೆ ಸರ್ರಿಯಲಿಸಂ ಚಿತ್ರಗಳು. ಇವರು ಅನೇಕ ಖ್ಯಾತ ಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಉನ್ ಚೆಯಿನ್ ಆಂಡಲೊ (1928), ವಿರಿಡಿಯಾನ (1962), ಡೈಯರಿ ಆಫ್ ಎ ಛೇಂಬರ್ ಮೇಯಿಡ್ (1964), ಬೆಲೆ ಡಿ ಜೋರ್(1967) ಈ ಚಿತ್ರಗಳು ಪ್ರಮುಖವಾದವುಗಳು.

1930ರ ದಶಕದಲ್ಲಿ ಅಮೆರಿಕದಲ್ಲಿ, ಅಂದರೆ ಹಾಲಿವುಡ್‍ನಲ್ಲಿ ಹಲವಾರು ಪ್ರತಿಭಾನ್ವಿತ ಚಿತ್ರ ನಿರ್ದೇಶಕರುಗಳು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಕಲಾತ್ಮಕಚಿತ್ರಗಳನ್ನು ಮಾಡಿದರು. ಅವುಗಳಲ್ಲಿ ಇಲ್ಲಿ ಸ್ಮರಿಸಬಹುದಾದ ಹಲವು ಚಿತ್ರಗಳೆಂದರೆ, ಫ್ರಾಂಕ್ ಕ್ಯಾಪ್ರ ಅವರ, ಇಟ್ ಹ್ಯಾಪೆನ್ಡ್ ಒನ್ ನೈಟ್(1934), ಮಿ. ಡೀಡ್ ಗೋಸ್ ಟು ಟೌನ್(1936), ಮಿಸ್ಟರ್ ಸ್ಮಿತ್ ಗೋಸ್ ಟು ವಾಷಿಂಗ್‍ಟನ್ (1939), ಜಾನ್ ಫೋರ್ಡ ರವರ ದಿ ಗ್ರೇಪ್ಸ್ ಆಫ್ ರಾತ್(1940), ದಿ ಸ್ಟೇಜ್ ಕೋಚ್(1939), ದಿ ಮ್ಯಾನ್ ಶಾಟ್ ದಿ ಲಿಬರ್ಟಿ ವಾಲ್ಲಾನ್ಸ್(1962), ಆರ್ಸನ್ ವೆಲ್ಸ್‍ರವರ ಸಿಟಿಜನ್ ಕೇನ್(1941), ಭಾರಿ ಭಾರಿ ಸೆಟ್ ಜೋಡಣೆಗಳೊಂದಿಗೆ ಅದ್ದೂರಿ ಮನರಂಜನೆ ಚಿತ್ರಗಳಿಗೆ ಹೆಸರುಮಾಡಿದ್ದ ಹಾಲಿವುಡ್‍ನಲ್ಲಿ ಇಲ್ಲಿ ಹೆಸರಿಸಿರುವ ಈ ಮೂರು ಚಿತ್ರನಿರ್ದೇಶಕರುಗಳು ಮತ್ತೂ ಕೆಲವರು ಸಾಮಾಜಿಕ ಜೀವನದಲ್ಲಿನ ಸಮಸ್ಯೆಗಳನ್ನು, ನೈಜತೆಗೆ ಒತ್ತು ಕೊಟ್ಟು ಕಲಾತ್ಮಕವಾಗಿ ಚಿತ್ರಿಸಿದರು. 

1899ರಲ್ಲಿ. ಲಂಡನ್ನಿನಲ್ಲಿ ಜನಿಸಿದ ಆಲ್‍ಫ್ರೆಡ್ ಹಿಚ್‍ಕಾಕ್ 1920ರಲ್ಲಿ ಬ್ರಿಟನ್ನಿನ ಫಿಲಂ ಸ್ಟುಡಿಯೊದಲ್ಲಿ ಕಲಾ ನಿರ್ದೇಶಕರಾಗಿ ಕೆಲಸಕ್ಕೆ ಸೇರಿ, 1926ರಲ್ಲಿ ಲಾಡ್ಜರ್ ಎಂಬ ಚಿತ್ರವನ್ನು ಮಾಡಿ ಜನರ ಮನಸ್ಸನ್ನು ಸೆಳೆದರು. ಮುಂದಿನ ದಿನಗಳಲ್ಲಿ ಇವರ ಪ್ರತಿಭೆ ದಿನೇ ದಿನೇ ಬೆಳೆದು, ದಿ ಮ್ಯಾನ್ ಹೂ ನ್ಯೂ ಟೂ ಮಚ್(1934), ಬ್ಲಾಕ್‍ಮೇಲ್(1929), ದಿ ಥರ್ಟಿ ನೈನ್ ಸ್ಟೆಪ್ಸ್(1935), ದಿ ಲೇಡಿ ವ್ಯಾನಿಷಸ್(1938) ಎಂಬ ಪತ್ತೇದಾರಿ ಚಿತ್ರಗಳನ್ನು ಮಾಡಿ ಆತ್ಯಂತ ಜನಪ್ರಿಯ ಚಿತ್ರ ನಿರ್ದೇಶಕರೆಂದು ಹೆಸರು ಮಾಡಿದರು. ಇವರ ಅಸಾಧಾರಣ ಪ್ರತಿಭೆಗೆ ಬೆರಗಾಗಿ, ಹಾಲಿವುಡ್‍ನವರು ಇವರನ್ನು ಅಮೆರಿಕಕ್ಕೆ ಕರೆಸಿಕೊಂಡು ಎಲ್ಲ ಸೌಕರ್ಯಗಳನ್ನು ಕೊಟ್ಟು ಇವರಿಂದ ಹಲವಾರು ವಿಶ್ವ ವಿಖ್ಯಾತ ಚಿತ್ರಗಳನ್ನು ಮಾಡಿಸಿದರು. ಇವರು ನಿರ್ದೇಶಿಸಿದ ಚಿತ್ರಗಳು ಪ್ರಪಂಚದ ಎಲ್ಲೆಡೆ ಪ್ರದರ್ಶನಗೊಂಡು ಹಾಲಿವುಡ್ ಸಂಸ್ಥೆಗಳಿಗೆ ಅಪಾರ ಹಣವನ್ನು ಗಳಿಸಿಕೊಟ್ಟವು. ಆವರು ಮಾಡಿದ ಚಿತ್ರಗಳ ಪೈಕಿ, ರೆಬೆಕ್ಕಾ(1940), ಸ್ಟ್ರೇಂಜರ್ಸ್ ಆನ್ ಎ ಟ್ರೈನ್(1951), ಟು ಕ್ಯಾಚ್ ಎ ಥೀಫ್(1954), ದಿ ಮ್ಯಾನ್ ಹೂ ನ್ಯೂ ಟೂ ಮಚ್(ಪುನರ್‍ನಿರ್ಮಾಣ 1955), ರೇರ್ ವಿಂಡೊ(1955), ವರ್ಟಿಗೊ(1958), ನಾರ್ತ್ ಬೈ ನಾರ್ತ್ ವೆಸ್ಟ್(1959), ಸೈಕೋ(1960), ದ ಬಡ್ರ್ಸ್(1963) ಚಿತ್ರಗಳು ವಿಶ್ವದ ಎಲ್ಲೆಡೆ ಪ್ರದರ್ಶನಗೊಂಡು ಹಿಚ್‍ಕಾಕ್ ರವರ ಹೆಸರು ಮನೆ ಮಂದಿಗೆ ಕೂಡ ಆಚ್ಚಳಿಯದೆ ಮನದಲ್ಲಿ ಚಿರಸ್ಥಾಯಿಯಾಗಿ ಇಂದಿಗೂ ಉಳಿಯುವಂತಾಗಿದೆ. ವಿಶ್ವದ ಹೆಸರಾಂತ ವಿಮರ್ಶಕರ ಪ್ರಕಾರ ಅಪರಾಧಗಳನ್ನು ಎಸಗಿದವರ ಮೇಲೆ ಪತ್ತೇದಾರಿ ನಡೆಸುವ ಚಿತ್ರಗಳನ್ನು ಮಾಡುವ ಆವರ ಕಲಾತ್ಮಕ ಪ್ರತಿಭೆಯನ್ನು ಮೀರಿಸುವವರು ಇಂದಿಗೂ ಎಲ್ಲೂ ಹುಟ್ಟಿಲ್ಲ ವೆಂಬುದು ಒಮ್ಮತದ ಅಭಿಪ್ರಾಯ. ಅವರು ನಿಧನಹೊಂದಿ (1980) 25 ವರ್ಷಗಳಾಗಿದ್ದರೂ ಆವರ ಚಿತ್ರಗಳನ್ನು ಇಂದಿಗೂ ಜನ ನೋಡಲು ಇಷ್ಟಪಡುತ್ತಾರೆ. 

1908ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ವ್ಯಕ್ತಿ ಡೇವಿಡ್ ಲೀನ್ ರವರು, 1930 ರ ವೇಳೆಗೆ, ಚಿತ್ರ ಸಂಕಲನಕಾರರಾಗಿ ಫಿಲಂ ಸ್ಟುಡಿಯೊದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರ ಕಾರ್ಯಕೌಶಲ್ಯವನ್ನು ಕಂಡ ಅನೇಕ ಚಿತ್ರ ನಿರ್ದೇಶಕರುಗಳು ಅವರ ಬಗ್ಗೆ ಅಪಾರ ಗೌರವ ಕೊಡುತ್ತಿದ್ದರು. 1944ರಲ್ಲಿ ಡೇವಿಡ್ ಲೀನ್ ರವರು ತಾವೇ ಸ್ವಂತವಾಗಿ ಚಿತ್ರಗಳನ್ನು ನಿರ್ದೇಶಿಸಲು ತೊಡಗಿದರು. ದಿ ಹ್ಯಾಪಿ ಬ್ರೀಡ್(1944), ಬ್ಲೈತ್ ಸ್ಪಿರಿಟ್(1945), ಬ್ರೀಫ್ ಎನ್‍ಕೌಂಟರ್(1945) ಇವು ಲೀನ್ ರವರ ಮೊದಲ ಮೂರು ಚಿತ್ರಗಳು. ಈ ಮೂರು ಚಿತ್ರಗಳಲ್ಲಿ ಬ್ರೀಫ್ ಎನ್‍ಕೌಂಟರ್ ಅತ್ಯಂತ ಹೆಸರು ಮಾಡಿದ ಚಿತ್ರವಾಯಿತು. ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳೂ ಲಭಿಸಿದವು. ಡೇವಿಡ್ ಲೀನ್ ರವರ ಖ್ಯಾತಿ ಮತ್ತು ಜನಪ್ರಿಯತೆ ಚಿತ್ರ ಪ್ರಪಂಚದಲ್ಲಿ ಎಲ್ಲೆಡೆ ಹರಡಿತು. ತಮ್ಮ ಮುಂದಿನ ಎರಡು ಚಿತ್ರಗಳನ್ನು ಲೀನ್ ರವರು ಹೆಸರಾಂತ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್ ರವರ ಕಾದಂಬರಿಗಳನ್ನು ಆಧರಿಸಿ, ಗ್ರೇಟ್ ಎಕ್ಸ್‍ಪೆಕ್ಟೇಷನ್ಸ್(1946) ಮತ್ತು ಆಲಿವರ್ ಟ್ವಿಸ್ಟ್(1948) ಚಿತ್ರಗಳನ್ನು ಮಾಡಿದರು. ಇದರಿಂದ ಆವರ ಖ್ಯಾತಿ ಮತ್ತಷ್ಟು ಹೆಚ್ಚಿತು. ಅಂತಹ ಪ್ರತಿಭೆಗಳ್ನು ಕಂಡ ತಕ್ಷಣ ಅಮೆರಿಕನ್ನರು ಅವರನ್ನು ತಮ್ಮಲ್ಲಿಗೆ ಸೆಳೆದುಕೊಳ್ಳುವುದು ಒಂದು ಸಂಪ್ರದಾಯ. ನಂತರದ ದಿನಗಳಲ್ಲಿ ಲೀನ್ ಹಾಲಿವುಡ್‍ನ ನಿರ್ಮಾಪಕರುಗಳಿಗಾಗಿ ಅದ್ಭುತವಾದ, ಅದ್ದೂರಿ ಚಿತ್ರಗಳನ್ನು ಮಾಡಿದರು. ಆವುಗಳಲ್ಲಿ ಪ್ರಮುಖವಾದವುವೆಂದರೆ ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್(1957), ಲಾರೆನ್ಸ್ ಆಫ್ ಅರೇಬಿಯ(1962), ಡಾಕ್ಟರ್ ಜಿವಾಗೋ(1965), ರಯಾನ್ಸ್ ಡಾಟರ್(1970) ಮತ್ತು ಎ ಪ್ಯಾಸೇಜ್ ಟು ಇಂಡಿಯ(1984) ಈ ಚಿತ್ರಗಳು ಪ್ರಪಂಚದ ಎಲ್ಲೆಡೆ ಪ್ರದರ್ಶನಗೊಂಡು, ಜನರ ಮೆಚ್ಚುಗೆಯನ್ನು ಗಳಿಸಿ, ಲೀನ್ ರವರಿಗೆ ಅಪಾರ ಕೀರ್ತಿಯನ್ನು ಗಳಿಸಿಕೊಟ್ಟಿತು. ಡೇವಿಡ್ ಲೀನ್‍ರವರು 1991ರಲ್ಲಿ ನಿಧನರಾದರು. 

	ಅಮೆರಿಕದಲ್ಲಿ 1881ರಲ್ಲಿ ರಂಗಭೂಮಿ ಕಲಾವಿದ ದಂಪತಿಗಳ ಮನೆಯಲ್ಲಿ ಜನಿಸಿದ ವ್ಯಕ್ತಿ ಸಿಸಿಲ್ ಬಿ. ಡಿ ಮಿಲ್ಲೆ. ಇವರು ರಂಗ ವೇದಿಕೆಯ ಮೇಲೆ ಕುಶಲತೆ ಸಾಧಿಸಲು ಅಶಕ್ತರಾದರೂ, ತಮ್ಮ ಕೌಶಲ್ಯವನ್ನು ಚಲನಚಿತ್ರದಲ್ಲಿ ಬೆಳೆಸಿಕೊಂಡರು. ಮೂಕಚಿತ್ರಗಳ ಕಾಲದಿಂದಲೂ ಚಿತ್ರಗಳನ್ನು ಮಾಡಲು ಉದ್ಯುಕ್ತರಾದ ಡಿ ಮಿಲ್ಲೆ ರವರು ಸ್ಯಾಮ್‍ಸನ್ ಅಂಡ್ ಡಿಲೈಲಾ(1949), ದಿ ಗ್ರೇಟ್ ಶೋ ಆನ್ ಅರ್ತ್(1952), ದಿ ಟೆನ್ ಕಮ್ಯಾಂಡ್‍ಮೆಂಟ್ಸ್(1956) ಎಂಬ ಚಿತ್ರಗಳನ್ನು, ಅಪಾರ ವೆಚ್ಚದಲ್ಲಿ, ಭವ್ಯ ಸೆಟ್ಟುಗಳೊಂದಿಗೆ ನಿರ್ಮಿಸಿದರು. ಈ ಚಿತ್ರಗಳೂ ಕೂಡ ಚಲನ ಚಿತ್ರ ಇತಿಹಾಸದಲ್ಲಿ, ವಿಶ್ವ ವಿಖ್ಯಾತ ಚಿತ್ರಗಳಾದವು. ಡಿ ಮಿಲ್ಲೆ ರವರು 1959ರಲ್ಲಿ ನಿಧನರಾದರು.

ಇಟಲಿಯಲ್ಲಿ ಮುಂಚಿನಿಂದಲೂ ಅಂದರೆ ಮೂಕಚಿತ್ರಗಳ ಕಾಲದಿಂದಲೂ ಉತ್ತಮ ಚಿತ್ರಗಳನ್ನು ಮಾಡುತ್ತ ಬಂದಿತ್ತು. ಎರಡನೇ ಮಹಾಯುದ್ಧದ ಅಂತ್ಯದಿಂದ, 1944ರ ಹೊತ್ತಿಗೆ ಮುಸ್ಸೋಲಿನಿಯ ಸರ್ವಾಧಿಕಾರ ಪತನಗೊಂಡಿತ್ತು. ಇಟಲಿಯಲ್ಲಿನ ಸಾಮಾಜಿಕ ಸ್ಥಿತಿ ದಾರುಣತೆಯಿಂದ. ತಲ್ಲಣಗೊಂಡು, ನಿರುದ್ಯೋಗ, ಬಡತನ ಇವುಗಳಿಂದ ಪೀಡಿತಗೊಂಡು ಪರಿಸ್ಥಿತಿ ಭೀಕರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಲನಚಿತ್ರದ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು, ನೈಜತೆಯಿಂದ ಜನರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಹಲವು ಚಿತ್ರ ನಿರ್ದೇಶಕರುಗಳು, ಚಲನ ಚಿತ್ರ ನಿರ್ಮಾಣದಲ್ಲಿ ಒಂದು ಹೊಸ ವಿಧಾನವನ್ನು ನಿರೂಪಿಸಿದರು. ಈ ಒಂದು ಹೊಸ ಪ್ರಯೋಗಕ್ಕೆ ನಿಯೊ ರಿಯಲಿಸಮ್(ಅತಿ ವಾಸ್ತವತೆ) ಎಂದು ಕರೆಯಲ್ಪಟ್ಟಿತು. ಈ ವಿಧಾನದಲ್ಲಿ ಮುಖ್ಯವಾಗಿ, ಕ್ಯಾಮೆರಾವನ್ನು ಕೇವಲ ಸ್ಟುಡಿಯೋಗಳಲ್ಲಿ ಮಾತ್ರ, ಸೆಟ್ಟುಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡುತ್ತಿದ್ದ ಪದ್ದತಿಯನ್ನು ಬದಲಿಸಿ, ಕ್ಯಾಮೆರಾವನ್ನು ಹೊರಾಂಗಣ ಸ್ಥಳಗಳಿಗೆ, ಅಂದರೆ ನಿಜ ಜೀವನಕ್ಕೆ ಸಮೀಪವಾದ ಸ್ಥಳಗಳಿಗೆ, ಉದಾಹರಣೆಗೆ, ಮನೆಗಳಲ್ಲಿ, ಪಟ್ಟಣದ ಬೀದಿಗಳಿಗೆ ಒಯ್ದು ಅಲ್ಲಿಯೇ ಚಿತ್ರೀಕರಣ ಮಾಡುವ ನವ್ಯತೆಯನ್ನು ಅಳವಡಿಸಿಕೊಳ್ಳಲಾಯಿತು. ಮತ್ತೊಂದು ವಿಶೇಷವೆಂದರೆ ಈ ಚಿತ್ರಗಳಲ್ಲಿ ಪಾತ್ರವಹಿಸುವವರು ಸಾಮಾನ್ಯ ವ್ಯಕ್ತಿಗಳು, ಕಾರ್ಮಿಕರು, ಗೃಹಿಣಿಯರು ಮತ್ತು ಇತರ ಜನಸಾಮಾನ್ಯರು. ನಿಯೊ ರಿಯಲಿಸಮ್ ಮಾದರಿಯನ್ನು ಉಪಯೋಗಿಸಿಕೊಂಡು ಮಾಡಿದ ಚಿತ್ರಗಳಲ್ಲಿ ಪ್ರಮುಖವಾದುವುವೆಂದರೆ ರೊಸ್ಸೆಲೆನಿರವರ ಓಪನ್ ಸಿಟಿ(1945), ಪೈಸಾ(1946), ಜರ್ಮನಿ, ಇಯರ್, ಜೀರೊ(1947), ವಿಸ್ಕೊಂಟಿ ಅವರ ದಿ ಅರ್ತ್ ಟ್ರಂಬಲ್ಸ್(1947), ವಿಟ್ಟೋರಿಯಾ ಡಿ ಸಿಕಾ ರವರ ಷೂಶೈನ್(1946), ಬೈಸಿಕಲ್ ಥೀವ್ಸ್(1948), ಉಂಬೆರ್ಟೊ ಡಿ(1951). ಈ ಒಂದು ಹೊಸ ವಿಧಾನದ ಬಗ್ಗೆ ಜನರಲ್ಲಿ, ಬುದ್ಧಿಜೀವಿಗಳಲ್ಲಿ, ಪ್ರಪಂಚದ ಇನ್ನಿತರೆ ದೇಶಗಳಲ್ಲಿ ಕೂಡ ಆಸಕ್ತಿ ಬೆಳೆಯಿತು. ಕಾರಣವೆಂದರೆ ಚಿತ್ರೀಕರಣದ ವೆಚ್ಚ ಕೂಡ ಕಡಿಮೆ ಆಗಿ ಅನೇಕ ಚಿತ್ರಾಸಕ್ತರು ತಮ್ಮನ್ನು ತಾವು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ಅನುವಾಯಿತು. ಉದಾಹರಣೆಗೆ ಡಿ ಸಿಕಾ ಅವರ ಬೈಸಿಕಲ್ ಥೀವ್ಸ್ ಚಿತ್ರದಲ್ಲಿ, ಕಾರ್ಮಿಕನೊಬ್ಬನು ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ ಮತ್ತು ಭೀಕರ ಸಮಸ್ಯೆಗಳಿಂದ ತೊಳಲುತ್ತಿದ್ದ ರಾಷ್ಟ್ರದಲ್ಲಿ, ಭಗೀರಥ ಪ್ರಯತ್ನದಿಂದ ಒಂದು ಹುದ್ದೆಯನ್ನು ಪಡೆದು, ತನ್ನ ಕೆಲಸಕ್ಕೆ ಅವಶ್ಯವಾದ ಬೈಸಿಕಲ್‍ನ್ನ ಕಳೆದುಕೊಳ್ಳುತ್ತಾನೆ. ಮತ್ತೆ ತನ್ನ ಪುಟ್ಟ ಮಗನ ಜೊತೆ ಕಳ್ಳನನ್ನು ಹುಡುಕಿ ಬೈಸಿಕಲ್ ಅನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಇದು ಚಿತ್ರದ ಕಥಾ ಸಾರಾಂಶ. ಇಂತಹ ಜನಸಾಮಾನ್ಯರ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಆಧರಿಸಿ ಚಿತ್ರೀಕರಣ ಮಾಡುವುದು ಈ ಶೈಲಿಯ ವಿಶೇಷ. ಇಟಲಿಯ ಮತ್ತೊಬ್ಬ ವಿಶ್ವ ವಿಖ್ಯಾತ ಚಲನ ಚಿತ್ರ ನಿರ್ದೇಶಕ ಫೆಡ್ರಿಕೊ ಫೆಲ್ಲಿನಿ ಕೂಡ ಈ ಶೈಲಿಯಲ್ಲಿ ಪರಿಣತೆ ಪಡೆದ ವ್ಯಕ್ತಿಯೇ. ಆದರೆ ಇವರು ನಿಯೊ ರಿಯಲಿಸಮ್‍ನಿಂದ ಹೊರಬಂದು ಅನೇಕ ಚಿತ್ರಗಳನ್ನು ಮಾಡಿದರು. ನೈಟ್ಸ್ ಆಫ್ ಕ್ಯಾಬ್ರಿಯಾ, ಲಾ ಸ್ಟ್ರಾಡಾ, ಲಾ ಡೊಲ್ಸ್ ವಿಟಾ, ಎಯಿಟ್ ಅಂಡ್ ಹಾಫ್, ಆರ್ಮರ್‍ಕಾರ್ಡ್ ಮುಂತಾದ ಅನೇಕ ಚಿತ್ರಗಳನ್ನು ಮಾಡಿ, ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳ ಸುರಿಮಳೆಯನ್ನೇ ಅನುಭವಿಸಿ, ವಿಶ್ವದ ಶ್ರೇಷ್ಠ ಚಿತ್ರ ನಿರ್ದೇಶಕರುಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ದಾಖಲಿಸಿಕೊಂಡರು. 1912ರಲ್ಲಿ ಜನಿಸಿ ಇಂದಿಗೂ ಚಿತ್ರದಲ್ಲಿ ಆಸಕ್ತಿಉಳ್ಳ ವ್ಯಕ್ತಿ ಇಟಲಿಯ ಮತ್ತೊಬ್ಬ ಅಸಾಧಾರಣ ಪ್ರತಿಭೆಯ ಚಿತ್ರ ನಿರ್ದೇಶಕ ಮೈಕೇಲ್ ಏಂಜೆಲೊ ಆಂಟೊನಿಯೊನಿ. ಇವರು ಕೂಡ 1960ರ ದಶಕದಲ್ಲಿ ತಮ್ಮ ತ್ರಿವಳಿ ಚಿತ್ರಗಳನ್ನು ಮಾಡಿ ಹೆಸರು ಮಾಡಿದರು. ಈ ಮೂರು ಚಿತ್ರಗಳೆಂದರೆ : ದಿ ಅಡ್ವೆಂಚರ್(1960), ದಿ ನೈಟ್(1961), ಮತ್ತು ದಿ ಎಕ್ಲಿಪ್ಸ್(1962). ಆಂಟೊನಿಯೊನಿ ಅವರ ಚಿತ್ರಗಳು ಬಹಳ ಮಂದಗತಿಯ ಚಿತ್ರಗಳು ಮತ್ತು ಅವರು ಏನು ಹೇಳ ಬಯಸುತ್ತಾರೆ ಎಂಬುದು ಒಮ್ಮೊಮ್ಮೆ ಕಗ್ಗಂಟಿನಿಂದ ಬಿಡಿಸಿಕೊಳ್ಳಬೇಕಾಗುತ್ತದೆ. ಚಿತ್ರಗಳಿಗೆ ಬಣ್ಣ ಬಂದ ಮೇಲೆ ಇಂಗ್ಲೆಂಡಿಗೆ ತೆರಳಿ ಬ್ಲೊ ಅಪ್ (1966) ಎಂಬ ಒಂದು ಅದ್ಭುತ ಚಿತ್ರವನ್ನು ಮಾಡಿದರು. ಮತ್ತೆ ಅಮೆರಿಕ ಮತ್ತು ಆಫ್ರಿಕಕ್ಕೆ ತೆರಳಿ ಜೆಬ್ರಿಸ್ಕಿ ಪಾಯಿಂಟ್ (1970) ಮತ್ತು ದಿ ಪ್ಯಾಸೆಂಜರ್ (1975) ಎಂಬ ಪ್ರಮುಖ ಚಿತ್ರಗಳನ್ನು ಮಾಡಿದರು. 
ಚಲನಚಿತ್ರವನ್ನು ಅಮೆರಿಕದಲ್ಲಿ ವ್ಯಾಪಾರೀ ದೃಷ್ಟಿಯಿಂದ ಉತ್ಪಾದನೆ ಮಾಡಿ ಹಣ ಸಂಪಾದನೆ ಮಾಡಿದರೆ, ಯೂರೋಪಿನಲ್ಲಿ ಅದನ್ನು ಕಲಾತ್ಮಕ ಸೃಜನಶೀಲತೆಗೆ ಬಳಸಿಕೊಂಡವರೆಂದರೆ ಫ್ರಾನ್ಸ್, ಇಟಲಿ, ಮತ್ತು ಇನ್ನಿತರ ದೇಶಗಳು. ಇದಕ್ಕೆ ಮುಖ್ಯ ಕಾರಣವೆಂದರೆ ಯುದ್ಧ. ಯುದ್ಧದ ತಾಪದಿಂದ ತೀರವಾಗಿ ಬಳಲಿದ ರಾಷ್ಟ್ರಗಳಾದ್ದರಿಂದ ಒಂದಲ್ಲ ಒಂದು ವಿಧದಲ್ಲಿ ಎಲ್ಲ ಕಲಾಮಾಧ್ಯಮಗಳಲ್ಲಿ ಯುದ್ಧದ ಪ್ರಭಾವವನ್ನು ನಾವು ಕಾಣಬಹುದು. 

ಸೋವಿಯತ್‍ನಲ್ಲಿ ಮುಂಚಿನಿಂದಲೂ ಚಲನಚಿತ್ರಗಳು ಅಡಳಿತದ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಅಲೆಕ್ಸಾಂಡರ್ ಡೊವ್‍ಜೆಂಕೊ, ಎಸ್. ಎಂ. ಐಸೆನ್ಸ್‍ಸ್ಟೈನ್, ಮತ್ತು ಐ. ಪುಡೊವ್‍ಕಿನ್ ರವರುಗಳು ಮೂಕಚಿತ್ರಗಳ ಕಾಲದಿಂದಲೂ ಅನೇಕ ಉತ್ತಮ ಚಿತ್ರಗಳನ್ನು, ಹೊಸ ತಾಂತ್ರಿಕ ಆಯಾಮಗಳನ್ನು ಉಪಯೋಗಿಸಿ ಮಾಡಿದರು. 

ವಿಶ್ವದ ಚಲನಚಿತ್ರ ಬೆಳವಣಿಗೆಯಲ್ಲಿ 1950 ಮತ್ತು 60ರ ದಶಕಗಳು ಆತ್ಯಂತ ಗಮನಾರ್ಹ ಕಾಲ. ಈ ಒಂದು ಸಮಯದಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ, ಅನೇಕ ಪ್ರತಿಭಾನ್ವಿತ ವ್ಯಕ್ತಿಗಳು ಚಿತ್ರಮಾಧ್ಯಮಕ್ಕೆ ಕಾಲಿಟ್ಟು ಚಿರಸ್ಮರಣೀಯ ಚಿತ್ರಗಳನ್ನು ಮಾಡಿದರು.

ಅಮೆರಿಕಾ ಮತ್ತು ಯೂರೋಪಿನಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ಪ್ರಗತಿ ಹೊಂದುತ್ತಿದ್ದಾಗ, ಏಷಿಯದಲ್ಲಿ ಕೂಡ ಚಿತ್ರ ನಿರ್ಮಾಣದಲ್ಲಿ ಈ ಬೆಳವಣಿಗೆ ಗೋಚರವಾಯಿತು.

ಜಪಾನಿನಲ್ಲಿ ಅಕಿರ ಕುರೊಸೊವ (1910-1998), ಕೆನ್ಜಿ ಮಿಜೊಗುಚಿ (1898-1956), ಮತ್ತು ಯಜಿರೊ ಓಜು (1903-1963) ಈ ಮೂರು ವ್ಯಕ್ತಿಗಳನ್ನು ಜಪಾನಿನ ಚಲನಚಿತ್ರ ಮಾಧ್ಯಮದ ಪಿತಾಮಹರೆಂದು ಕರೆಯುತ್ತಾರೆ.
1951ರಲ್ಲಿ, ಅಕಿರ ಕುರೊಸಾವ ಅವರ ರ್ಯಾಷೊಮಾನ್ ಚಿತ್ರ ವೆನಿಸ್ ಚಿತ್ರೋತ್ಸವದಲ್ಲಿ ಬಂಗಾರದ ಪದಕವನ್ನು (ಸ್ವರ್ಣಸಿಂಹ)ವನ್ನು ಗಳಿಸಿ ಜಪಾನ್ ಚಿತ್ರರಂಗವನ್ನು, ಪ್ರಪಂಚದ ಚಿತ್ರ ನಕ್ಷೆಯಲ್ಲಿ ಅಷ್ಟು ಎತ್ತರದ ಪ್ರಶಸ್ತಿ ಗಳಿಸಿದ ಚಿತ್ರಗಳ ಸಾಲಿನಲ್ಲಿ ತನ್ನ ಹೆಸರನ್ನು ಮುದ್ರಿಸಿದ ಮೊದಲ ಚಿತ್ರವಾಯಿತು. ಒಂದು ಘಟನೆಯ ಬಗ್ಗೆ ನಾಲ್ಕು ರೀತಿಯ ವಿಭಿನ್ನ ರೂಪಗಳನ್ನು ಸಾಕ್ಷಿಗಳು ಸತ್ಯವೆಂದು ಪ್ರತಿಪಾದಿಸುವ ಸನ್ನಿವೇಶವನ್ನು ಚಿತ್ರೀಕರಿಸಿ, ಮಾನವ ಜನಾಂಗದಲ್ಲಿ ಸತ್ಯವನ್ನು ಶೋಧಿಸುವುದು ಎಷ್ಟು ಕಷ್ಟ ಎಂಬ ಅಂಶವನ್ನು ಅತ್ಯಂತ ಕುತೂಹಲಕಾರಿಯಾಗಿ ನಿರ್ದೇಶಿಸಿದ ಚಿತ್ರವೆನಿಸಿತು. ಕುರೋಸಾವ ಅವರ ಚಿತ್ರಗಳು, ಮೂಲತಹ ಜಪಾನಿನ ಕಥವಾಸ್ತುಗಳಾಗಿದ್ದರೂ, ನಿರೂಪಣೆಯಲ್ಲಿ ಪಾಶ್ಚಾತ್ಯ ದೇಶಗಳ ಪ್ರಭಾವ ಅವುಗಳಲ್ಲಿ ಎದ್ದು ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.ಈ ಕಾರಣದಿಂದಾಗಿ ಕುರೋಸಾವ ಅವರ ಚಿತ್ರಗಳು ಪಾಶ್ಚಾತ್ಯದೇಶಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದವು. ಕುರೋಸಾವ ಅವರ ಮತ್ತೊಂದು ಅದ್ಭುತ ಚಿತ್ರ ಸೆವೆನ್ ಸಮುರಾಯಿ (1954), ಈ ಚಿತ್ರದಲ್ಲಿ ಏಳು ಜನ ಸಮುರಾಯ್ (ವೀರ ಸಿಪಾಯಿಗಳು)ಗಳು, ತಮ್ಮ ಸಾಹಸದಿಂದ ಒಂದು ಹಳ್ಳಿಯ ಜನರನ್ನು, ಒಂದು ದೊಡ್ಡ ದರೋಡೆಕೋರರ ಗುಂಪಿನ ಮುತ್ತಿಗೆಯಿಂದ ಹೇಗೆ ಪಾರುಮಾಡಿದರು ಎಂಬುದನ್ನು ಆತ್ಯಂತ ರೋಮಾಂಚನಕಾರಿಯಾಗಿ ಚಿತ್ರಿತವಾಗಿದೆ. ಈ ಚಿತ್ರದಿಂದ ಸ್ಫೂರ್ತಿಗೊಂಡು, ಈ ಶೈಲಿಯನ್ನು ಅನುಕರಣೆ ಮಾಡಿ, ಹಾಲಿವುಡ್‍ನಿಂದ ಹಿಡಿದು (ಮ್ಯಾಗ್ನಿಫಿಷಿಯಂಟ್ ಸೆವೆನ್), ಅನೇಕ ಭಾಷೆಗಳಲ್ಲಿ ಚಿತ್ರಗಳು ಮಾಡಲ್ಪಟ್ಟವು. ಕುರೊಸಾವ ಅವರು ಪ್ರಪಂಚದ ಆತ್ಯಂತ ಶ್ರೇಷ್ಠಚಿತ್ರ ನಿರ್ದೇಶಕರುಗಳಲ್ಲಿ ಅಗ್ರಸ್ಥಾನ ಗಳಿಸಿದವರಲ್ಲಿ ಒಬ್ಬರೆಂದು ಹೆಸರು ಮಾಡಿದರು. ಅವರು ತಮ್ಮ ಜೀವನದಲ್ಲಿ ಐದು ದಶಕಗಳಷ್ಟು ಅವಧಿಯಲ್ಲಿ ಅಸಂಖ್ಯಾತ ಚಿತ್ರಗಳನ್ನು ಮಾಡಿದರು. ತಮ್ಮ 83 ವರ್ಷ ವಯಸ್ಸಿನವರೆಗೂ ಚಿತ್ರ ನಿರ್ಮಾಣದಲ್ಲಿ ದುಡಿದರು. ಆವರು ನಿರ್ದೇಶಿಸಿದ ಇತರ ಪ್ರಮುಖ ಚಿತ್ರಗಳೆಂದರೆ : ಥ್ರೋನ್ ಆಫ್ ಬ್ಲಡ್ (1957), ದಿ ಹಿಡನ್ ಫೋರ್ಟೆಸ್s (1958), ಯೊಜಿಂಬೊ (1961), ಸನ್‍ಜುರೊ (1962), ರೆಡ್ ಬಿಯರ್ಡ್ (1965), ದೆರ್ಸು ಉಜಲ (1975), ಕಗೆಮುಷ (1980), ರಾನ್ (1985), ಡ್ರೀಮ್ (1985), ಮದದಾಯೊ (1993). ಕುರೊಸಾವ ಅವರು 1998ರಲ್ಲಿ ನಿಧನ ಹೊಂದಿದರು. 

 	ಬಡ ಕುಟುಂಬದಲ್ಲಿ ಜನಿಸಿದ ಕೆನ್ಜಿ ಮಿಜೊಗುಚಿ ಅವರು ಮೂಕ ಚಿತ್ರಗಳ ಕಾಲದಿಂದಲೂ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ತಮ್ಮ 30 ವರ್ಷಗಳ ಸಾಧನೆಯಲ್ಲಿ ಸುಮಾರು 90 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದರು. ಹೊರ ರಾಷ್ಟ್ರಗಳ ಪ್ರಭಾವವಿಲ್ಲದೆ, ಜಪಾನಿನ ಮೂಲ ಸಂಸ್ಕøತಿಗೆ ಹಾಸುಹೊಕ್ಕಾಗಿ ಹೊಂದಿಕೊಂಡು ಚಿತ್ರಗಳನ್ನು ಮಾಡಿ ಜಪಾನಿನ ಜನತೆಯಿಂದ ಅಪಾರ ಗೌರವ ಸಂಪಾದಿಸಿದ ವ್ಯಕ್ತಿ ಮಿಜೊಗುಚಿ.

ತಮ್ಮ ವೃತ್ತಿ ಜೀವನದಲ್ಲಿ ದಾಖಲೆ ಮಾಡುವಷ್ಟು ಚಿತ್ರಗಳನ್ನು ಮಾಡಿ ವಿಶ್ವದಲ್ಲಿ ಆತ್ಯಂತ ಮೇಧಾವಿಗಳಲ್ಲಿ ಒಬ್ಬರೆನಿಸಿದ ಖ್ಯಾತಿ ಅವರದು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ವಿಶ್ವದ ಶ್ರೇಷ್ಠ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳಿಸಿ ಚಿತ್ರ ಪ್ರಪಂಚದಲ್ಲಿ ತಮ್ಮ ಹೆಸರನ್ನು ಅಮರವಾಗುವಂತಹ ಚಿತ್ರಗಳ ಸಾಲಿನಲ್ಲಿ ಸೇರುವಂತಹ ಚಿತ್ರಗಳೆಂದರೆ : ದಿ ಲೈಫ್ ಆಫ್ ಒಹರು (1952), ಮ್ಯೂಸಿಕ್ ಆಫ್ ದಿ ಗಿಯೊನ್ (1953), ಉಗೆಟ್ಜು ಮೊನೊಗಟಾರಿ (1953), ಸಾನ್‍ಷೋ ಡಯೊ (1954), ಷಿನ್ ಹೈಕಿ ಮೊನೊಗಟಾರಿ (1955).

ಯಸುಜಿರೊ ಓಜು ಅವರು ಜಪಾನಿನ ಮತ್ತೊಬ್ಬ ಧೀಮಂತ ಚಿತ್ರ ನಿರ್ದೇಶಕ. 1963ರಲ್ಲಿ, ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದಾಗ ಅವರು 53 ಚಿತ್ರಗಳನ್ನು ಮಾಡಿದ್ದರು. ಅಂದರೆ ಅವರು ತಮ್ಮ ವೃತ್ತಿಯಲ್ಲಿ ಎಷ್ಟು ನಿರತರಾಗಿದ್ದರೆಂಬುದು ಅರಿವಾಗುತ್ತದೆ. ಓಜು ಅವರು ಕೌಟುಂಬಿಕ ಜೀವನದ ಕಥಾವಸ್ತುಗಳನ್ನು ಆಧರಿಸಿದ ಕಥೆಗಳನ್ನು ಚಿತ್ರೀಕರಿಸುವುದರಲ್ಲಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿದರು. ಅವರು ಮಾಡಿದ ಚಿತ್ರಗಳಲ್ಲಿ, ತಮ್ಮ ಕುಶಲತೆಯನ್ನು ಚಲನಚಿತ್ರಗಳ ನಿರ್ಮಾಣದಲ್ಲಿ ಬೆಳೆಸಿಕೊಂಡರು. ಮೊದಲಿನ ಹಲವು ಚಿತ್ರಗಳು ಹಾಸ್ಯ ಪ್ರಧಾನವಾಗಿದ್ದವು. ನಂತರದಲ್ಲಿ ಕೌಟುಂಬದಲ್ಲಿನ ತಂದೆ ಮಕ್ಕಳ ಸಂಬಂಧ, ವಿವಾಹ, ಮನಸ್ತಾಪ, ಸಂತಸ, ಆಶೆ, ನಿರಾಶೆ ಮುಂತಾದ ವಸ್ತುಗಳನ್ನು ಆಧರಿಸಿ ಚಿತ್ರಕಥೆ ಬರೆಯುತ್ತಿದ್ದರು. ಓಜು ಅವರ ಶೈಲಿ ವಿಭಿನ್ನ ರೀತಿಯದು. ಅವರು ಯಾವಾಗಲೂ ಕ್ಯಾಮೆರಾವನ್ನು ಕೆಳಮಟ್ಟದ ಎತ್ತರದಲ್ಲಿ ಸ್ಥಾಪಿಸಿ ಹಲವಾರು ಪಾತ್ರಧಾರಿಗಳು ಒಂದೇ ಷಾಟಿನಲ್ಲಿ ಬಂದುಹೋಗುವಂತೆ ಯೋಜಿಸಿಕೊಂಡು ಚಿತ್ರೀಕರಣ ಮಾಡುತ್ತಿದ್ದರು. ಸಾಮಾನ್ಯವಾಗಿ ಮನುಷ್ಯರು ಕೂತು ನೋಡುವ ಎತ್ತರದ ದೃಷ್ಟಿಕೋನದಂತೆ ಚಿತ್ರವನ್ನು ಕ್ಯಾಮೆರಾದಿಂದ ಸೆರೆ ಹಿಡಿಯುತ್ತಿದ್ದರು. ಆವರು ತಯಾರಿಸಿದ ಚಿತ್ರಗಳಲ್ಲಿ ಟೋಕಿಯೊ ಸ್ಟೋರಿ(1953) ಎಂಬ ಚಿತ್ರ ಆತ್ಯಂತ ಯಶಸ್ವಿ ಚಿತ್ರ. ಈ ಚಿತ್ರ 1953ರಲ್ಲಿ ತಯಾರಾದರೂ, ಯೂರೋಪಿಗೆ ಪಾದ ಬೆಳೆಸಲು 5 ವರ್ಷ ತಡವಾಯಿತು. ಯೂರೋಪಿನ ಖ್ಯಾತ ವಿಮರ್ಶಕರು, ಚಿತ್ರ ಪ್ರೇಮಿಗಳು ಈ ಚಿತ್ರವನ್ನು ವೀಕ್ಷಿಸಿ, ಆದರಲ್ಲಿನ ಕುಶಲತೆಯನ್ನು ಕಂಡು ಬೆರಗಾದರು. ನಂತರದ ವರ್ಷಗಳಲ್ಲಿ ಅವರ ಚಿತ್ರಗಳಿಗೆ ಅಪಾರ ಬೇಡಿಕೆ ಬಂದು ಎಲ್ಲ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳ ಉತ್ಸವಗಳು ನಡೆದವು. ಅವರು ಮಾಡಿದ ಚಿತ್ರಗಳಲ್ಲಿ ಹೆಸರು ಮಾಡಿದ ಚಿತ್ರಗಳೆಂದರೆ : ಅರ್ಲಿ ಸಮ್ಮರ್(1951), ಟೋಕಿಯೊ ಸ್ಟೋರಿ(1953), ಗುಡ್ ಮಾರ್ನಿಂಗ್(1959), ಆ್ಯನ್ ಆಟಂ ಆಫ್ಟರ್‍ನೂನ್(1962). ಓಜು ಅವರು ತಮ್ಮ 60ನೇ ವಯಸ್ಸಿನಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದರು. 

ಜಪಾನಿನಲ್ಲಿ ಮೇಲ್ಕಂಡ ಮೂರು ಪ್ರತಿಭಾನ್ವಿತ ವ್ಯಕ್ತಿಗಳಲ್ಲದೆ, ಇನ್ನೂ ಅನೇಕರು ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡು ಖ್ಯಾತಿಗಳಿಸಿದ್ದಾರೆ. ಅವರುಗಳಲ್ಲಿ ಕೊನ್ ಇಚಿಕಾವ(ಬರ್ಮಿಸ್ ಹಾರ್ಪ್, 1954), ಹಿರೋಷಿ ತೆಷಿಗಹರ, (ವುಮನ್ ಇನ್ ದ ಡೂಮ್ಸ್, 1964) ಈ ಎರಡು ಕೃತಿಗಳು ಅಂತರ ರಾಷ್ಟ್ರೀಯ ಖ್ಯಾತಿಗಳಿಸಿದ ಚಿತ್ರಗಳು.

1960ರ ದಶಕದಲ್ಲಿ ಜಪಾನಿನಲ್ಲಿ ಕೂಡ ಫ್ರಾನ್ಸಿನಂತೆ ಹೊಸ ಅಲೆಯ ಚಿತ್ರಗಳು ಪ್ರಾರಂಭವಾದುವು. ಈ ಚಿತ್ರಗಳು ಕುರೊಸಾವ, ಮಜಿಗೊಚಿ, ಓಜು ಇವರುಗಳ ಚಿತ್ರಗಳ ಶೈಲಿಗೆ ತೀರ ಭಿನ್ನವಾಗಿ, ಅದರ ವಿರುದ್ಧವಾಗಿ ಹೊಸ ಶೈಲಿಯ ಜಾಡನ್ನು ಸೃಷ್ಟಿಸಿದರು. ಇದು ಹೊಸ ಅಲೆಯಾಯಿತು. ಹೊಸ ಅಲೆಯ ಚಿತ್ರಗಳಿಗೆ ಕಾರಣರಾದ ಪ್ರಮುಖರೆಂದರೆ ನಗಿಸ ಓಷೊಮಾ ಮತ್ತು ಅವರ ಸಂಗಡಿಗರಾದ ಮಸಾಷಿರೊ ಶಿನೋಡ, ಯೋಧಿಷಿಗೆ ಯಾಷಿಡಾ, ಶೊಹಿ ಇಮಾಮುರ ಇವರುಗಳು ಪ್ರಮುಖರು. ನಗಿಸ ಓಷೊಮಾ ಅವರ ಚಿತ್ರಗಳಲ್ಲಿ ಡೆತ್ ಬೈ ಹ್ಯಾಂಗಿಂಗ್(1968), ಬಾಯ್(1969), ಎಂಪೈರ್ ಆಫ್ ಪ್ಯಾಷನ್(1978), ಮತ್ತು ಇಮಾಮುರ ಅವರ ಚಿತ್ರಗಳಲ್ಲಿ ಬ್ಯಾಲಡ್ ಆಫ್ ನರಯಾಮ(1983) ಈ ಚಿತ್ರಗಳು ವಿಶ್ವಖ್ಯಾತಿಗಳಿಸಿದ ಚಿತ್ರಗಳು. 

	ರಷ್ಯದಲ್ಲಿ 1953 ರವರೆಗೆ ಸ್ಟಾಲಿನರ ಸಾರ್ವಭೌಮತ್ವದಲ್ಲಿ ಸಾಂಸ್ಕøತಿಕ ಚಟಿವಟಿಕೆಗಳು ಸ್ಥಗಿತಗೊಂಡಿತ್ತು. ನಂತರದಲ್ಲಿ ಕಲಾವಿದರಿಗೆ ಸ್ವಲ್ಪ ಸ್ವತಂತ್ರ ಲಭಿಸಿ ಕಲೆ ಮತ್ತೆ ಸ್ವಲ್ಪ ಉಸಿರಾಡಲು ಪ್ರಾರಂಭಿಸಿತು. ಈ ಒಂದು ಅವಕಾಶವನ್ನು ಉಪಯೋಗಿಸಿಕೊಂಡು ಹಲವು ಉತ್ಸಾಹಿ ವ್ಯಕ್ತಿಗಳು ಕೆಲವು ಚಿತ್ರಗಳನ್ನು ಮಾಡಿದರು. ಅವುಗಳಲ್ಲಿ, ಮಿಖಾಯಿಲ್ ಕಲಾತೂಜಿಷಿವಿಲ್ಲಿ ಅವರ ದಿ ಕ್ರೇನ್ಸ್ ಆರ್ ಫ್ಲೈಯಿಂಗ್(1958) ಮತ್ತು ಗ್ರಿಗೊರಿ ಚುಖರೈ ಅವರ ಬ್ಯಾಲಡ್ ಆಫ್ ಸೋಲ್ಡಜರ್(1961) ಈ ಎರಡು ಚಿತ್ರಗಳು ಸತತವಾಗಿ ಯುದ್ಧದಲ್ಲಿ ಮುಳುಗಿ ತತ್ತರಿಸಿದ್ದ ರಷ್ಯದ ಜನರಿಗೆ ಯುದ್ಧ ಮತ್ತು ಅದರಿಂದ ಆಗುವ ಪರಿಣಾಮಗಳನ್ನು ಮನಮುಟ್ಟುವಂತೆ ಅರಿವು ಮಾಡಿಕೊಡುವಲ್ಲಿ ಸಂಪೂರ್ಣ ಸಫಲತೆಯನ್ನು ಸಾಧಿಸಿದವು. ದಿ ಕ್ರೇನ್ಸ್ ಆರ್ ಫ್ಲೈಯಿಂಗ್ ಚಿತ್ರದಲ್ಲಿ ಒಬ್ಬ ಯುವಕನು ಯುದ್ಧಕ್ಕಾಗಿ ಕರೆಬಂದಾಗ ತನ್ನ ಪ್ರಿಯತಮೆಯನ್ನು ಅಗಲಬೇಕಾಗಿ ಬರುತ್ತದೆ. ಆಕೆ, ಆ ಯುವಕನ ಕುಟುಂಬದಲ್ಲಿ ಬಂದು ಸೇರಿಕೊಳ್ಳುತ್ತಾಳೆ. ಆದರೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಕೊನೆಗೆ ಆ ಯುವಕ ಯುದ್ಧದಿಂದ ವಾಪಸಾಗುವುದೇ ಇಲ್ಲ. ಬ್ಯಾಲಡ್ ಆಫ್ ಸೋಲ್ಡಜರ್ ಚಿತ್ರದಲ್ಲಿ ಕೇವಲ 19 ವರ್ಷದ ಯುವಕ ಯುದ್ಧದಲ್ಲಿ ಭಾಗವಹಿಸಿ ಕಾದಾಡುತ್ತಾನೆ, ಅವನ ಪರಾಕ್ರಮಕ್ಕೆ ಮೆಚ್ಚಿ ಸೈನ್ಯದಲ್ಲಿ ಅವನಿಗೆ ತನ್ನ ತಾಯಿಯನ್ನು ನೋಡಿಕೊಂಡು ಬರಲು ಮೂರು ದಿನಗಳ ರಜ ಮಂಜೂರು ಮಾಡುತ್ತಾರೆ. ಯುದ್ಧದ ಭೀಕರ ಪರಿಸ್ಥಿತಿಯಲ್ಲಿ, ಆವನು ತನ್ನ ಊರನ್ನು ತಲುಪಿದಾಗ, ಕೇವಲ ಕೆಲವು ನಿಮಿಷಗಳಷ್ಟೇ ಅವಕಾಶ ಅವನಿಗೆ ಸಿಕ್ಕಿ ಮತ್ತೆ ಅವನು ಹಿಂತಿರುಗಬೇಕಾಗುತ್ತದೆ. ಈ ಎರಡು ಚಿತ್ರಗಳು ರಷ್ಯದಲ್ಲಿಯೇ ಅಲ್ಲದೆ, ಪ್ರಪಂಚದ ಎಲ್ಲಡೆ ಪ್ರದರ್ಶನಗೊಂಡು, ಅಸಂಖ್ಯಾತ ಪ್ರಶಸ್ತಿಗಳನ್ನು ಗಳಿಸಿ, ಜನರ ಮೆಚ್ಚುಗೆ ಗಳಿಸಿವೆ. ಇಂದಿಗೂ ನೋಡಿ ಆನಂದಿಸಬಹುದಾದ ಚಿತ್ರಗಳು. ಪ್ರತಿಭೆಯನ್ನು ಗುರುತಿಸುವುದು, ಪ್ರೋತ್ಸಾಹ ಕೊಡುವುದು ಆವರಲ್ಲಿ ಹಾಸುಹೊಕ್ಕಾಗಿ ಬಂದಿರುವ ವಾಡಿಕೆ. ಕಳೆದ ಒಂದು ದಶಕದಲ್ಲಿ ಸುಮಾರು 300 ಕ್ಕೂ ಹೆಚ್ಚು ಹಿಂದುಳಿದ ರಾಷ್ಟ್ರಗಳಲ್ಲಿರುವ ಪ್ರತಿಭೆಗಳಿಗೆ ಧನ ಸಹಾಯ ಮಾಡಿ ಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ.

1950 ದಶಕದಲ್ಲಿ ಹೊಸ ಅಲೆಯ ಚಿತ್ರಗಳನ್ನು ಹೇಗೆ ಮಾಡಬೇಕೆಂದು ಚರ್ಚಿಸಿ ಚಲನಚಿತ್ರಗಳ ಬಗ್ಗೆ ಹೊಸ ಸಿದ್ಧಾಂತವನ್ನು ಬರೆದವರು ಆಂಡ್ರೆ ಬಾಜಿನ್‍ರವರು. ಇವರ ಜೊತೆಯಲ್ಲಿ ಕೆಲಸ ಮಾಡಿದ ಅನೇಕರು ಸ್ವಂತವಾಗಿ ಚಿತ್ರಗಳನ್ನು ಮಾಡಿ ಹೊಸ ಅಲೆ ಎಂದರೆ ಏನು ಎಂಬುದನ್ನು ಚಿತ್ರಜಗತ್ತಿಗೆ ತೋರಿಸಿಕೊಟ್ಟರು.

ಈ ಒಂದು ಪೀಳಿಗೆಯಲ್ಲಿ, ಚಿತ್ರಗಳನ್ನು ಮಾಡಿದವರಲ್ಲಿ ಫ್ರಾಂಕಾಯ್ಸ್ ಟ್ರೂಫಾಟ್, ಜೀನ್-ಲೂಕ್ ಗೊಡ್ಡಾರ್ಡ್, ಅಲನ್ ರೆಸ್ನಾಯಿಸ್, ಕ್ಲಾಡೆ ಚಬ್ರೋಲ್, ರಾಬರ್ಟ ಬ್ರೆಸ್ಸನ್, ಜಾಕ್ವೆಟ್ಟೆ ರಿವೆಟ್ಟೆ, ಎರಿಕ್ ರೋಮರ್ ಮುಂತಾದವರುಗಳು. 
ಫ್ರಾಂಕಾಯ್ಸ್ ಟ್ರೂಫಾಟ್ ರವರು ಮಾಡಿದ ಚಿತ್ರಗಳಲ್ಲಿ ದಿ ಫೋರ್ ಹಂಡ್ರೆಡ್ ಬ್ಲೋಸ್(1959), ಜೂಲ್ಸ್ ಎಟ್ ಜಿಮ್(1961), ಫೊರೆನ್‍ಹಿಟ್(1966), ಡೇ ಫಾರ್ ನೈಟ್(1974) ಚಿತ್ರಗಳು ಪ್ರಮುಖವಾದುವುಗಳು.
ಜೀನ್ ಲಕ್ ಗೊಡ್ಡಾರ್ಡ್ ರವರ ಕೃತಿಗಳಲ್ಲಿ ಬ್ರೆತ್‍ಲೆಸ್(1959), ಆಲ್ಫಾವಿಲ್ಲೆ(1965), ವೀಕ್‍ಎಂಡ್(1968) ಮುಂತಾದ 30 ಕ್ಕೂ ಹೆಚ್ಚು ಚಿತ್ರಗಳನ್ನು ಅವರು ಮಾಡಿದರು.

ಅಲನ್ ರೆಸ್ನಾಯ್ಸ್‍ರವರು 1959ರಲ್ಲಿ ಹಿರೋಷಿಮಾ, ಮಾನ್ ಅಮೊರ್ ಚಿತ್ರವನ್ನು ಮಾಡಿ ಅದರಲ್ಲಿ ಜಪಾನಿನ ಹಿರೋಷಿಮದಲ್ಲಿ ಅಣುಬಾಂಬಿನಿಂದ ಉಂಟಾದ ಭೀಕರ ದುಷ್ಪರಿಣಾಮಗಳನ್ನು, ಒಬ್ಬ ಫ್ರೆಂಚ್ ಮಹಿಳೆ ಮತ್ತು ಒಬ್ಬ ಜಪಾನಿನ ವ್ಯಕ್ತಿ ಇವರಿಬ್ಬರ ಪ್ರೇಮದ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಿ ವಿಶ್ವ ವಿಖ್ಯಾತ ಜನಪ್ರಿಯತೆ ಗಳಿಸಿದರು. ಇವರು ನಂತರದಲ್ಲಿ ಲಾಸ್ಟ್ ಇಯರ್ ಅಟ್ ಮಾರಿನ್‍ಬಾಡ್ (1962), ಮುರಿಯಲ್ (1963) ಮತ್ತು ನೈಟ್ ಅಂಡ್ ಫಾಗ್ ಎಂಬ ಪ್ರಮುಖ ಚಿತ್ರಗಳನ್ನು ಮಾಡಿ ಹೆಸರು ಮಾಡಿದರು.

ಫ್ರೆಂಚ್ ಚಿತ್ರ ನಿರ್ದೇಶಕರುಗಳಲ್ಲಿ ತನ್ನದೇ ಆದ ವಿಭಿನ್ನ ಶೈಲಿಯನ್ನು ಸೃಷ್ಟಿಸಿ ಚಲನಚಿತ್ರದ ಇತಿಹಾಸದಲ್ಲಿ ಹಲವಾರು ಶ್ರೇಷ್ಠ ಕೃತಿಗಳನ್ನು ಚಿತ್ರ ಪ್ರಪಂಚಕ್ಕೆ ಅರ್ಪಿಸಿ ತಮ್ಮ ಕೀರ್ತಿಯನ್ನು ಅಮರಗೊಳಿಸಿ ಮೆರೆದ ವ್ಯಕ್ತಿ ರಾಬರ್ಟ್ ಬ್ರೆಸ್ಸನ್(1901-1999). ಇವರ ಮಂದಗತಿಯ ಶೈಲಿಯಲ್ಲಿ ಜೀವನದ ವಿವಿಧ ಮುಖಗಳನ್ನು ಚಿತ್ರ ಪ್ರೇಮಿಗಳು ಕಂಡುಕೊಂಡು ಅನುಭವಿಸಿದ್ದಾರೆ. ಇವರ ಶೈಲಿಯನ್ನು ಅನುಕರಣೆ ಮಾಡಲು ಹೋಗಿ ಅನೇಕ ಚಿತ್ರ ನಿರ್ದೇಶಕರುಗಳು ಸೋತಿದ್ದಾರೆ. ಇವರ ಚಿತ್ರಗಳು ಹಣಸಂಪಾದನೆಯಲ್ಲಿ, ಮತ್ತು ಜನಪ್ರಿಯತೆಯಲ್ಲಿ ಸದಾ ಸೋಲನ್ನು ಆನಭವಿಸುತ್ತಿದ್ದದ್ದು ಸರ್ವೇಸಾಮಾನ್ಯವಾಗಿ ಹೋಗಿತ್ತು. ಆದರೂ ಅವರ ಚಿತ್ರoಗಳಿಗೆ ಪ್ರಶಸ್ತಿಗಳು ಮತ್ತು ಉತ್ತಮ ಪ್ರಶಂಸೆಯ ವಿಮರ್ಶೆಗಳು ಲಭಿಸುತ್ತಿತ್ತು. ಕೊನೆ ಕೊನೆಗೆ ಅವರಿಗೆ ಚಿತ್ರನಿರ್ಮಾಪಕರುಗಳು ಸಿಗದೆ 13 ಚಿತ್ರಗಳನ್ನು ಮಾಡಿ ಸುಮ್ಮನೆ ಕೂರಬೇಕಾಯಿತು. ಇದೊಂದು ದುರದೃಷ್ಟಕರ ಸಂಗತಿ. ಆವರು ನಿರ್ದೇಶಿಸಿದ ಚಿತ್ರಗಳಲ್ಲಿ ಕಂಟ್ರಿ ಪ್ರೀಸ್ಟ್(1950), ಎ ಮ್ಯಾನ್ ಎಸ್ಕೇಪ್ಡ್(1952), ಪಿಕ್‍ಪಾಕೆಟ್(1959), ಮೌಷಿಟ್ಟೆ(1966) - ಈ ಚಿತ್ರಗಳು ಅವಿಸ್ಮರಣೀಯ ಅನುಭವ ಕೊಡುವ ಚಿತ್ರಗಳು. 

ಯೂರೋಪಿನಲ್ಲಿ ಫ್ರಾನ್ಸ್ ಮತ್ತು ಇಟಲಿಯಂತೆ ಇನ್ನಿತರ ರಾಷ್ಟ್ರಗಳಲ್ಲಿ ಕೂಡ ಚಲನಚಿತ್ರವನ್ನು ಪ್ರಬುದ್ಧ ಸಾಹಿತ್ಯದಂತೆ, ಅಥವಾ ಮತ್ತಿತರ ಕಲಾ ಮಾಧ್ಯಮಗಳಂತೆ, ಕಲಾತ್ಮಕವಾಗಿ ನಿರ್ಮಿಸುವ ಪ್ರವೃತ್ತಿ ಬೆಳೆಯಿತು. ಈ ನಿಟ್ಟಿನಲ್ಲಿ ಪರಾಮರ್ಶಿಸಿ ನೋಡಿದಾಗ, ಸ್ವೀಡನ್, ಜರ್ಮನಿ, ಅಂದಿನ ಸಮಾಜವಾದಿ ರಾಷ್ಟ್ರವಾಗಿದ್ದ ಪೋಲೆಂಡ್, ಹಂಗೆರಿ, ಜೆಕೊಸ್ಲೊವಾಕಿಯಾ, ಫ್ರೆಂಚ್ ಮತ್ತು ಇಟಲಿಯ ಚಿತ್ರಗಳಂತೆ ಹೊಸ ಅಲೆಯ ಜಾಡಿನಲ್ಲಿ ಉತ್ತಮ ಚಿತ್ರಗಳನ್ನು ಕೊಡುವಲ್ಲಿ ಸಫಲವಾದವು.
1918ರಲ್ಲಿ ಸ್ವೀಡನ್ನಿನಲ್ಲಿ, ಪಾದ್ರಿಯ ಮಗನಾಗಿ ಜನಿಸಿದ ಇಂಗ್‍ಮಾರ್ ಬರ್ಗಮನ್ ರವರು ಚಲನಚಿತ್ರ ಪ್ರಪಂಚದ ಇತಿಹಾಸದಲ್ಲಿ ಜಪಾನಿನ ಕುರೋಸಾವ ಅವರುಗಳ ಸಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ, ಮನ್ನಣೆ ಗಳಿಸಿದ ಭಾರತ ರತ್ನ ಸತ್ಯಜಿತ್ ರೇ ಅವರು ಭಾರತದಲ್ಲೇ ಅಲ್ಲದೆ, ಪ್ರಪಂಚದ ಎಲ್ಲೆಡೆ ಪ್ರಶಸ್ತಿಗಳನ್ನು ಗಳಿಸಿದ ವ್ಯಕ್ತಿ. ವಿಶ್ವವಿಖ್ಯಾತ ಅಪು ಚಿತ್ರತ್ರಯ, ಪಥೇರ್ ಪಾಂಚಾಲಿ(1955), ಅಪರಾಜಿತೊ(1956), ಅಪೂರ್ ಸಂಸಾರ್(1959) ಈ ತ್ರಿವಳಿ ಚಿತ್ರಗಳು ಭಾರತದ ಚಲನಚಿತ್ರ ರಂಗವನ್ನು ಪ್ರಪಂಚದ ನಕ್ಷೆಯಲ್ಲಿ ಅಚ್ಚಳಿಯದಂತೆ ದಾಖಲೆ ಮಾಡಿಕೊಂಡಿತು. ರೇ ಅವರ ಚಾರುಲತಾ, ಜಲಸಾಘರ್, ಮಹಾನಗರ್ ಮತ್ತು ಇನ್ನೂ ಅನೇಕ ಚಿತ್ರಗಳು ಅವರನ್ನು ಅಗ್ರಸ್ಥಾನಕ್ಕೆ ಒಯ್ದಿತು. 

ಜರ್ಮನಿಯಲ್ಲಿ ಕೂಡ ಹೊಸ ಅಲೆಯ ಪ್ರಭಾವ ಸಾಕಷ್ಟು ತಟ್ಟಿತು. ಆರ್ ಡಬ್ಲ್ಯೂ ಫಾಸ್‍ಬೈಂಡರ್, ವರ್ನರ್ ಹರ್‍ಜೋಗ್, ವಿಮ್ ವೆಂಡರ್ಸ್ ವೋಲ್ಕರ್ ಷೊಲೊನ್‍ಡ್ರಾಫ್ ಅವರುಗಳು ಜರ್ಮನಿಯ ಪ್ರಮುಖ ನಿರ್ದೇಶಕರುಗಳು. ಜರ್ಮನಿಯಲ್ಲಿ ತಯಾರಾದ ಚಿತ್ರಗಳಲ್ಲಿ ಮೆಟ್ರೊಪೊಲೀಸ್(1925), ವಿಂಗ್ಸ್ ಆಫ್ ಡೆಸೈರ್(1987), ಅಲಿ, ಫಿಯರ್ ಈಟ್ಸ್ ದಿ ಸೋಲ್(1970), ರೋಸಾ ಲಕ್ಸೆಂಬರ್ಗ್, ಅಕ್ವೈರ್ ದಿ ರಾತ್ ಆಫ್ ಗಾಡ್, ರನ್ ಲೋಲಾ ರನ್ ಈ ಚಿತ್ರಗಳನ್ನು ಆತ್ಯುತ್ತಮ ಚಿತ್ರಗಳೆಂದು ಪರಿಗಣಿಸಬಹುದು. ಇರಾನಿನಲ್ಲಿ ಕೂಡ ಒಂದು ಹೊಸ ಪೀಳಿಗೆ ಉದಿಸಿ ಪ್ರಪಂಚದ ಎಲ್ಲ ಪ್ರಮುಖ ಚಿತ್ರೋತ್ಸವಗಳಲ್ಲಿ ಇರಾನ್ ಚಿತ್ರಗಳು ಲಗ್ಗೆ ಹಾಕಿ ಅನೇಕ ಪ್ರಶಸ್ತಿಗಳನ್ನು ಗಳಿಸುತ್ತಿವೆ. ಸರಳವಾದ, ಸಹಜವಾದ, ಚುಟುಕು ಕಥಾವಸ್ತುಗಳನ್ನು ಆಧರಿಸಿ ನೂತನ ಶೈಲಿಯಲ್ಲಿ ಚಿತ್ರಗಳನ್ನು ಮಾಡಿ ಹೆಸರು ಮಾಡುತ್ತಿರುವ ಅಸಂಖ್ಯಾತ ಪ್ರತಿಭಾನ್ವಿತ ಕಲಾವಿದರುಗಳು ಚಿತ್ರನಿರ್ಮಾಣದಲ್ಲಿ ತೊಡಗಿರುವುದು ಒಂದು ಸಂತಸದ ಬೆಳವಣಿಗೆ. ಇಂದು ವಿಶ್ವದಲ್ಲಿ ಇರಾನ್ ಚಿತ್ರಗಳಿಗೆ ಹೆಚ್ಚು ಹೆಚ್ಚು ಪುರಸ್ಕಾರ ದೊರೆಯುತ್ತಿರುವುದು ಸರ್ವವಿದಿತ ಸಂಗತಿ. ಈ ನಿಟ್ಟಿನಲ್ಲಿ ತಮ್ಮ ಚಿತ್ರಗಳ ಮೂಲಕ ಮಾರ್ಗದರ್ಶನ ಮಾಡಿದ ನಿರ್ದೇಶಕರುಗಳ ಪೈಕಿ, ಮಖಮಲ್ ಬಾಫ್, ಅಬ್ಬಾಸ್ ಕಿರೋಸ್ತಾಮಿ, ಮಜೀದ್ ಮಜೀದಿ ಮತ್ತು ಇನ್ನೂ ಅನೇಕ ಯುವಕರುಗಳು ಮುಂದೆ ಬರುತ್ತ್ತಿದ್ದಾರೆ. 
(ಹೆಚ್.ಎನ್‍ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ